ಕುಂದಾಪುರ,ಬೈಂದೂರು ಒಟ್ಟು 15 ಕೋವಿಡ್ ಸೋಂಕು ದೃಢ,ಹಲವು ಪ್ರದೇಶ ಸಿಲ್ ಡೌನ್
ಕುಂದಾಪುರ: ಸೋಮವಾರ ಬಂದಿರುವ ಕೋವಿಡ್ ಪರೀಕ್ಷಾ ವರದಿಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ಒಟ್ಟು 15 ಪ್ರಕರಣಗಳಲ್ಲಿ ಕೋವಿಡ್ ಸೋಂಕು ದೃಢವಾಗಿದೆ.
ಹೆಚ್ಚು ಪ್ರಕರಣಗಳು ಬೈಂದೂರು ಭಾಗದಲ್ಲಿ ದೃಢಪಟ್ಟಿವೆ. ಕ್ವಾರಂಟೈನ್ ಅವಧಿ ಮುಗಿಸಿದ್ದರೂ ಕೋವಿಡ್ ಪರೀಕ್ಷಾ ವರದಿ ಬರುವುದಕ್ಕಿಂತ ಮೊದಲೇ ಸರ್ಕಾರಿ ಸೂಚನೆಯಂತೆ ಮನೆ ಸೇರಿಕೊಳ್ಳುತ್ತಿರುವ ವ್ಯಕ್ತಿಗಳಲ್ಲಿ ಕೋವಿಡ್ ದೃಢ ಪಡುತ್ತಿರುವುದರಿಂದ ಕುಂದಾಪುರ ಹಾಗೂ ಬೈಂದೂರಿನ ಹಲವು ಪ್ರದೇಶಗಳನ್ನು ಕಂಟೈನ್‌ಮೆಂಟ್ ಪ್ರದೇಶಗಳಾಗಿ ನಿರ್ಬಂಧಗೊಳಿಸಲಾಗುತ್ತಿದೆ.
ಮೇ 30ರಂದು ಕೋವಿಡ್ ದೃಢಪಟ್ಟ 9 ಪ್ರಕರಣಗಳಿಂದಾಗಿ ಕುಂದಾಪುರ ತಾಲ್ಲೂಕಿನ ಗುಜ್ಜಾಡಿ, ಬಸ್ರೂರು, ನೆಂಪು, ಕೋಡಿ, ವಡೇರಹೋಬಳಿ, ಹಳ್ನಾಡು ಹಾಗೂ ಬೈಂದೂರು ತಾಲ್ಲೂಕಿನ ಉಳ್ಳೂರು–11 ಹಾಗೂ ಬಡಾಕೆರೆ ಗ್ರಾಮಗಳ ಕೆಲವು ಪ್ರದೇಶಗಳನ್ನು ಕಂಟೈನ್‌ಮೆಂಟ್ ಹಾಗೂ ಬಫರ್ ವಲಯಗಳಾಗಿ ಗುರುತಿಸಿ ಪೊಲೀಸ್ ಬ್ಯಾಂಡ್ ಕಟ್ಟಿ , ಅಲ್ಲಿ ನಿರ್ದಿಷ್ಟ ಚಟುವಟಿಕೆ ನಿರ್ಬಂಧಗೊಳಿಸಲಾಗಿದೆ.
ಮೇ 31ರಂದು ಬೈಂದೂರು ತಾಲ್ಲೂಕಿನ ಕಾಲ್ತೂಡು ಗ್ರಾಮದ ಕಬ್ಸೆಯಲ್ಲಿ 1 ಕೋವಿಡ್ ಪ್ರಕರಣ ದಾಖಲಾಗಿತ್ತು. ಸೋಮವಾರ ಬಂದಿರುವ ಕೋವಿಡ್ ಪರೀಕ್ಷಾ ವರದಿಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ಒಟ್ಟು 15 ಪ್ರಕರಣಗಳಲ್ಲಿ ಕೋವಿಡ್ ಸೋಂಕು ದೃಢವಾಗಿದೆ. ಇಂದಿನ ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ಬೈಂದೂರು ಭಾಗದಲ್ಲಿ ವರದಿಯಾಗಿದೆ. ಹರ್ಕೂರು ಸಮೀಪದ ಸೆಲಕೋಡು, ನಾಡಾ ಗ್ರಾಮದ ತೊಟಕೇರಿ, ದೊಂಬೆ ಶಿರೂರು, ಯಡ್ತರೆ, ಬೈಂದೂರು ಹಾಗೂ ಕೆರ್ಗಾಲ್ ಗ್ರಾಮಗಳಲ್ಲಿನ ಒಟ್ಟು 6 ಕಡೆಗಳಲ್ಲಿ ಕಂಟೈನ್‌ಮೆಂಟ್ ನಿರ್ಬಂಧ ಹೇರಲಾಗಿದೆ.
ಕೋವಿಡ್ ಸೋಂಕಿತರನ್ನು ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.ಇವರೆಲ್ಲರ ಸಂಪರ್ಕಿತರ ಗಂಟಲ ದ್ರವದ ಮಾದರಿಯನ್ನು ಪರೀಕ್ಷಾ ವರದಿಗಾಗಿ ಕಳುಹಿಸಲಾಗುತ್ತಿದೆ. ಸೋಂಕು ಪತ್ತೆಯಾದವರ ಮನೆ ಇರುವ ಪ್ರದೇಶದ 100 ಮೀಟರ್ ಸುತ್ತ ಚಟುವಟಿಕೆ ನಿರ್ಬಂಧಿಸಲಾಗುತ್ತದೆ.