ಜೂ.21: ಉಡುಪಿ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯಲ್ಲಿ ಹೋಮ್ ಕೇರ್ ಸೇವೆಗಳು ಮತ್ತು ಹೊಸ ನೇತ್ರಶಾಸ್ತ್ರ ವಿಭಾಗಗಳ ಲೋಕಾರ್ಪಣೆ
ಉಡುಪಿ: ಶತಮಾನದಷ್ಟು ಹಳೆಯದಾದ ಉಡುಪಿಯ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ ಲೊಂಬಾರ್ಡ್ ಹೋಮ್ ಕೇರ್ (ಮನೆ ಆರೈಕೆ) ಸೇವೆಗಳು ಮತ್ತು ಹೊಸ ನೇತ್ರಶಾಸ್ತ್ರ ವಿಭಾಗವನ್ನು ಜೂನ್ 21 ರಂದು(ನಾಳೆ) ಬೆಳಿಗ್ಗೆ 11 ಗಂಟೆಗೆ ಆಸ್ಪತ್ರೆ ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ.
ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮ ಪ್ರಾಂತ್ಯದ ಬಿಷಪ್ ಅತಿ ವಂದನೀಯ ಹೇಮಚಂದ್ರ ಕುಮಾರ್ ಅವರು ನೂತನ ಸೇವೆಗಳನ್ನು ಉದ್ಘಾಟಿಸಲಿದ್ದಾರೆ. ಆಸ್ಪತ್ರೆಯ ನೇತ್ರತಜ್ಞ ಡಾ.ನರೇಂದ್ರ ಶೆಣೈ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಆಸ್ಪತ್ರೆಯ ನೇತ್ರತಜ್ಞ ಡಾ.ಆರ್ಥರ್ ರೋಡ್ರಿಗಸ್ ಮತ್ತು ಹಿರಿಯ ವೈದ್ಯಾಧಿಕಾರಿ ಡಾ.ಗಣೇಶ್ ಕಾಮತ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತ್ತನ್ನ ಅಧ್ಯಕ್ಷತೆ ವಹಿಸುವರು.
ಲೊಂಬಾರ್ಡ್ ಹೋಮ್ ಕೇರ್ (ಮನೆ ಆರೈಕೆ) ಸೇವೆಗಳು
ಅನೇಕ ಹಿರಿಯ ನಾಗರಿಕರು ಮತ್ತು ಹಾಸಿಗೆ ಹಿಡಿದಿರುವ ಅಥವಾ ದೈಹಿಕ ಪರಿಶ್ರಮಕ್ಕೆ ತುಂಬಾ ದುರ್ಬಲರಾಗಿರುವ ರೋಗಿಗಳಿಗೆ ಹೋಮ್ ಕೇರ್ (ಮನೆ ಆರೈಕೆ) ಸೂಕ್ತ ಪರಿಹಾರವಾಗಿದೆ. ಹಿಂದಿನ ಕಾಲದಲ್ಲಿ ಕುಟುಂಬ ವೈದ್ಯರು ಸೇವೆ ಸಲ್ಲಿಸಲು ರೋಗಿಗಳ ಮನೆಗೆ ಭೇಟಿ ನೀಡುತ್ತಿದ್ದರು. ಅಂತಹ ಸೇವೆಗಳು ಇಂದು ಸಾಮಾನ್ಯವಾಗಿ ಲಭ್ಯವಿಲ್ಲ. ಇದರಿಂದಾಗಿ ಕ್ಲಿನಿಕ್ ಅಥವಾ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗದ ದಿನನಿತ್ಯದ ತಪಾಸಣೆಯ ಅಗತ್ಯವಿರುವ ರೋಗಿಗಳು ತುಂಬ ಕಷ್ಟಪಡುವಂತಾಗುತ್ತದೆ. ಇಂತಹ ರೋಗಿಗಳ ಅಗತ್ಯತೆಗಳನ್ನು ಪೂರೈಸಲು ಲೊಂಬಾರ್ಡ್ ಆಸ್ಪತ್ರೆಯು ಲೊಂಬಾರ್ಡ್ ಹೋಮ್ ಕೇರ್ ಸೇವೆಗಳನ್ನು ಪರಿಚಯಿಸುತ್ತಿದೆ. ಇದರ ಮೂಲಕ ಆಸ್ಪತ್ರೆಯ ಆರೈಕೆ ತಂಡವು ರೋಗಿಗಳನ್ನು ಅವರ ಮನೆಯ ಸೌಕರ್ಯದಲ್ಲಿ ಭೇಟಿ ಮಾಡುತ್ತದೆ.
ಹೋಮ್ ಕೇರ್ ಸೇವೆಗಳಲ್ಲಿ ಪ್ರಮುಖವಾಗಿ ಆಸ್ಪತ್ರೆಯ ವೈದ್ಯರು ಮಧ್ಯಾಹ್ನ 3-5 ಗಂಟೆಗಳ ನಡುವೆ ಮನೆ ಭೇಟಿ ನೀಡುವರು. ಹಿರಿಯ ವೈದ್ಯಾಧಿಕಾರಿ ಡಾ.ಗಣೇಶ್ ಕಾಮತ್ ಅವರು ರೋಗಿಗಳನ್ನು ಅವರ ಮನೆಯಲ್ಲಿಯೇ ವೈದ್ಯಕೀಯ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡುವರು. ಅದಲ್ಲದೆ ಶುಶೂಷಾ ಆರೈಕೆ, ಪ್ರಯೋಗಾಲಯ ಪರೀಕ್ಷೆಗಳು, ಫಿಸಿಯೋಥೆರಪಿ ಮತ್ತು ಮಾಸಿಕ ಔಷಧಿಗಳ ವಿತರಣೆ ಸೇವೆ ಕೂಡ ಲಭ್ಯವಿವೆ.
ನೇತ್ರಶಾಸ್ತ್ರ ವಿಭಾಗ
1990 ರ ದಶಕದಲ್ಲಿ ಲೊಂಬಾರ್ಡ್ ಆಸ್ಪತ್ರೆಯು ನೇತ್ರಶಾಸ್ತ್ರ ಸೇವೆಗಳಿಗೆ ಹೆಸರುವಾಸಿಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ನೇತ್ರಶಾಸ್ತ್ರದಲ್ಲಿ ನಿಯಮಿತ ಹೊರರೋಗಿ ಸೇವೆಗಳು ಲಭ್ಯವಿದ್ದಿರಲಿಲ್ಲ. ಈಗ ನೇತ್ರತಜ್ಞ ಡಾ.ಅರ್ಥರ್ ರೋಡ್ರಿಗಸ್ ಅವರು ಹೊರರೋಗಿ ಸೇವೆಗಳನ್ನು ನಿಯಮಿತವಾಗಿ ಬೆಳಿಗ್ಗೆ 9:30 ರಿಂದ 12:30 ರ ವರೆಗೆ ಒದಗಿಸಲಿದ್ದಾರೆ. ಅವರಲ್ಲದೆ ಕನ್ನಲೆಂಟ್ ನೇತ್ರತಜ್ಞ ಡಾ. ನರೇಂದ್ರ ಶೆಣೈ ಅವರು ಸೇವೆಗಳನ್ನು ಒದಗಿಸಲಿದ್ದಾರೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಸೇರಿದಂತೆ ಸಂಪೂರ್ಣ ಶ್ರೇಣಿಯ ನೇತ್ರಶಾಸ್ತ್ರ ಸೇವೆಗಳನ್ನು ಕೈಗೆಟುಕುವ ವೆಚ್ಚದಲ್ಲಿ ಒದಗಿಸುವ ಗುರಿಯನ್ನು ಆಸ್ಪತ್ರೆ ಹೊಂದಿದೆ.
“ಲೊಂಬಾರ್ಡ್ ಹೋಮ್ ಕೇರ್ ಸೇವೆಗಳು ಮತ್ತು ಹೊಸ ನೇತ್ರಶಾಸ್ತ್ರ ಸೇವೆಗಳನ್ನು ಪರಿಚಯಿಸುವುದರ ಮೂಲಕ ಈ ಪ್ರದೇಶದ ಜನರ ಪ್ರಮುಖ ಅಗತ್ಯಗಳನ್ನು ಪೂರೈಸುವ ಸಮಗ್ರ ಮತ್ತು ಸಹಾನುಭೂತಿಯ ಆರೋಗ್ಯ ಕೇಂದ್ರವಾಗಲು ಆಸ್ಪತ್ರೆಯ ಕನಸನ್ನು ನನಸಾಗುವಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಲೊಂಬಾರ್ಡ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತ್ತನ್ನ ತಿಳಿಸಿದ್ದಾರೆ.
ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ಬಗ್ಗೆ
ಜೂನ್ 15, 1923 ರಂದು ಯುವ ಸ್ವಿಸ್ ಮಿಷನರಿ ಡಾ. ಇವಾ ಲೊಂಬಾರ್ಡ್ ಸ್ಥಾಪಿಸಿದ ಲೊಂಬಾರ್ಡ್ ಆಸ್ಪತ್ರೆಯು ಕರಾವಳಿ ಕರ್ನಾಟಕದ ಅತ್ಯಂತ ಹಳೆಯ ಆಸ್ಪತ್ರೆಗಳಲ್ಲಿ ಒಂದಾಗಿದೆ. ಕೇವಲ ಆರು ಹಾಸಿಗೆಗಳಿಂದ ಆರಂಭಗೊಂಡ ಆಸ್ಪತ್ರೆಯು ಈಗ 125 ಹಾಸಿಗೆಗಳನ್ನು ಎಲ್ಲಾ ಪ್ರಮುಖ ಸೌಲಭ್ಯಗಳನ್ನು ಹೊಂದಿದೆ.