ತಮಿಳುನಾಡು: ಅಕ್ರಮ ಮದ್ಯ ಸೇವಿಸಿ 31 ಸಾವು- 70ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು
ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಬುಧವಾರ ಅಕ್ರಮ ಮದ್ಯ ಸೇವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ ಮತ್ತು 70ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕಲ್ಲಕುರಿಚಿ ಜಿಲ್ಲಾಧಿಕಾರಿ ಎಂಎಸ್ ಪ್ರಶಾಂತ್ ಖಚಿತಪಡಿಸಿದ್ದಾರೆ.
ಮದ್ಯ ಮಾದರಿಗಳಲ್ಲಿ ಮಾರಣಾಂತಿಕ ಮೆಥನಾಲ್ ಇರುವಿಕೆಯು ಪ್ರಯೋಗಾಲಯದ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಸರ್ಕಾರದ ಪ್ರಕಟಣೆಯ ಪ್ರಕಾರ, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಬುಧವಾರ ರಾತ್ರಿ ಚೆನ್ನೈನಲ್ಲಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶಕರ ಪತ್ರಿಕಾ ಪ್ರಕಟಣೆ ಪ್ರಕಾರ, ಐವರು ಸಾವಿಗೀಡಾಗಿದ್ದು, ಇನ್ನೂ 24 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದರೆ, ಕಲ್ಲಕುರಿಚಿ ಜಿಲ್ಲೆಯ ಅಧಿಕೃತ ಮೂಲಗಳು ಸಾವಿನ ಸಂಖ್ಯೆ 16ಕ್ಕೆರಿದ್ದು, ಕಲ್ಲಕುರಿಚಿಯ ಸರ್ಕಾರಿ ಆಸ್ಪತ್ರೆಯಲ್ಲಿ 72 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದೆ.
ಇವರಲ್ಲಿ 32 ಮಂದಿಯನ್ನು ಪುದುಚೇರಿಯ ಜಿಪ್ಮರ್ ಮತ್ತು ಸೇಲಂ ಮತ್ತು ವಿಲ್ಲುಪುರಂನ ಸರ್ಕಾರಿ ಆಸ್ಪತ್ರೆಗಳಂತಹ ಇತರ ಆಸ್ಪತ್ರೆಗಳಿಗೆ ದಾಖಲಿಸಲು ಶಿಫಾರಸು ಮಾಡಲಾಗಿದೆ. ಮೃತರನ್ನು ಜಿ ಪ್ರವೀಣ್‌ಕುಮಾರ್ (26), ಡಿ ಸುರೇಶ್ (40), ಕೆ ಶೇಖರ್ (59), ಎಸ್ ವಡಿವುಕ್ಕರಸಿ, ಸಿ ಕಂದನ್, ಪಿ ಜಗದೀಶನ್, ಆರ್ ಸುರೇಶ್, ಎಂ ಸೆಲ್ವಂ ಮತ್ತು ಎಂ ಆರುಮುಗಂ ಎಂದು ಗುರುತಿಸಲಾಗಿದೆ. ಇತರ ಸಂತ್ರಸ್ತರ ಹೆಸರುಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ.
ಈ ಸಂಬಂಧ 49 ವರ್ಷದ ಕೆ ಕನ್ನುಕುಟ್ಟಿ ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ ವಶಪಡಿಸಿಕೊಂಡ ಸುಮಾರು 200 ಲೀಟರ್ ಅಕ್ರಮ ಮದ್ಯ ವಿಶ್ಲೇಷಣೆಯಲ್ಲಿ ಮಾರಣಾಂತಿಕ ಮೆಥನಾಲ್ ಇರುವಿಕೆ ಪತ್ತೆಯಾಗಿದೆ ಎಂದು ಸರ್ಕಾರ ತಿಳಿಸಿದೆ.