ವಾರಣಾಸಿಯಲ್ಲಿ ಭದ್ರತಾ ಲೋಪ: ಪ್ರಧಾನಿ ಮೋದಿ ಕಾರಿಗೆ ಚಪ್ಪಲ್ ಎಸೆದ ವಿಡಿಯೋ ವೈರಲ್
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿ ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಮಂಗಳವಾರ ಭೇಟಿ ನೀಡಿದ ವೇಳೆ ಅವರ ಭದ್ರತೆಯಲ್ಲಿ ಭಾರಿ ಲೋಪವಾಗಿದೆ.
ನಿನ್ನೆ ವಾರಣಾಸಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಪ್ರಯಾಣಿಸುತ್ತಿದ್ದ ಬುಲೆಟ್ ಪ್ರೂಫ್ ಕಾರಿನ ಮೇಲೆ ಚಪ್ಪಲ್ ಎಸೆಯಲಾಗಿದ್ದು, ಅದು ಬಾನೆಟ್ ಮೇಲೆ ಬಿದ್ದಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಇಂದು ವೈರಲ್ ಆಗಿರುವ ಘಟನೆಯ ವಿಡಿಯೋದಲ್ಲಿ ಭದ್ರತಾ ಅಧಿಕಾರಿಯೊಬ್ಬರು ಪ್ರಧಾನಿ ಮೋದಿ ಕುಳಿತಿರುವ ವಾಹನದ ಬಾನೆಟ್ ಮೇಲೆ ಬಿದ್ದ ಚಪ್ಪಲ್ ಅನ್ನು ತೆಗೆದು ಎಸೆಯುತ್ತಾರೆ. ಜನರ ಗುಂಪಿನಲ್ಲಿದ್ದ ಯಾರೋ ಚಪ್ಪಲ್ ಅನ್ನು ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಮೇಲ್ನೋಟಕ್ಕೆ ಇದು ಭದ್ರತಾ ಲೋಪ ಪ್ರಕರಣದಂತೆ ತೋರುತ್ತಿದೆ. ಕಾರಿನ ಬಾನೆಟ್ ಮೇಲೆ ಬಿದ್ದ ಚಪ್ಪಲ್ ಅನ್ನು ಭದ್ರತಾ ಸಿಬ್ಬಂದಿ ತೆಗೆದು ಹಾಕುತ್ತಾರೆ. ಈ ಘಟನೆಯ ನಂತರ ಪ್ರಧಾನಿಯ ಕಾರು ನಿಲ್ಲದೆ ಮುಂದೆ ಸಾಗುತ್ತದೆ.
ವಿಡಿಯೋವನ್ನು ರೆಕಾರ್ಡ್ ಮಾಡಿದ ವ್ಯಕ್ತಿಯ ಧ್ವನಿ ಸಹ ಅದರಲ್ಲಿ ರೆಕಾರ್ಡ್ ಆಗಿದ್ದು, ಪ್ರಧಾನಿ ಮೋದಿಯವರ ವಾಹನದ ಮೇಲೆ ಯಾರೋ ಚಪ್ಪಲ್ ಎಸೆದಂತೆ ತೋರುತ್ತಿದೆ ಎಂದು ಹೇಳುತ್ತಿರುವುದು ರೆಕಾರ್ಡ್ ಆಗಿದೆ.