ಪರೀಕ ಎಸ್‌ಡಿಎಂ ಆಸ್ಪತ್ರೆ: ಜೂ.21 ರಂದು ‘ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ’
ಉಡುಪಿ, ಜೂ.19: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಜೂ.21ರ ಶುಕ್ರವಾರ ಮುಂಜಾನೆ ಪರ್ಕಳ ಪರೀಕದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ‘ಸೌಖ್ಯವನ’, ಪರ್ಯಾಯ ಶ್ರೀಪುತ್ತಿಗೆ ಮಠದ ಸಹಯೋಗದೊಂದಿಗೆ ‘ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಉಡುಪಿಯಲ್ಲಿ ಆಯೋಜಿಸಿದೆ ಎಂದು ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜೂ.21ರ ಮುಂಜಾನೆ 6:30ಕ್ಕೆ ಉಡುಪಿ ಬಸ್‌ನಿಲ್ದಾಣ ಬಳಿಯ ಕ್ಲಾಕ್ ಟವರ್ ಎದುರು ಶಾಸಕ ಯಶಪಾಲ್ ಎ.ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಬಿ.ಎಸ್.ತೋಳ್ಪಾಡಿತ್ತಾಯ ಹಾಗೂ ಸೌಖ್ಯವನ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಗೋಪಾಲ ಪೂಜಾರಿ ಉಪಸ್ಥಿತರಿರುವರು. ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸುಮಾರು 300 ಮಂದಿ ಯೋಗಪಟುಗಳು ಕ್ಲಾಕ್‌ಟವರ್‌ನಿಂದ ಯೋಗ ನಡಿಗೆಯಲ್ಲಿ ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ ಪ್ರಾರಂಭಿಸುವರು. ಇವರ ನಡಿಗೆ ಶ್ರೀಕೃಷ್ಣ ಮಠದ ರಥಬೀದಿ ಮೂಲಕ ರಾಜಾಂಗಣದ ಎದುರಿನ ಗೀತಾಮಂದಿರದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ತೋಳ್ಪಾಡಿತ್ತಾಯ ತಿಳಿಸಿದರು.
ಬೆಳಗ್ಗೆ 7:00ಗಂಟೆಗೆ ಗೀತಾಮಂದಿರದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಆದರ್ಶ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಜಿ.ಎಸ್.ಚಂದ್ರಶೇಖರ್, ಬಿ.ಎಸ್. ತೋಳ್ಪಾಡಿತ್ತಾಯ ಹಾಗೂ ಡಾ.ಗೋಪಾಲ ಪೂಜಾರಿ ಉಪಸ್ಥಿತರಿರುವರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆದೇಶದಂತೆ ನಡೆಯುವ ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸುವ ಯೋಗಪಟುಗಳಿಂದ ಯೋಗಾಸನ ಹಾಗೂ ಯೋಗದ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಗೋಪಾಲ ಪೂಜಾರಿ, ಆಸ್ಪತ್ರೆಯ ವೈದ್ಯರಾದ ಡಾ.ಶೋಭಿತ ಶೆಟ್ಟಿ ಹಾಗೂ ಡಾ.ಪೂಜಾ ಬಿ. ಹಾಗೂ ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.