“ಕೆಂಪಾದವೋ ಎಲ್ಲಾ ಕೆಂಪಾದವೋ”..!
ಈಗ ಕೆಲ ದಿನಗಳಿಂದ ಸೂರ್ಯಾಸ್ತ ಹಾಗೂ ಸೂರ್ಯೋದಯ ನೋಡಿದಿರಾ?. ಅದೆಂತಹ ಕೆಂಬಣ್ಣ. ಇಡೀ ವರ್ಷದಲ್ಲೇ , ಚೆಂದದ ಸೂರ್ಯೋದಯ ಹಾಗೂ ಸೂರ್ಯಾಸ್ತ. ಸೂರ್ಯಾಸ್ತವಂತೂ ಕೆಂಪೋ ಕೆಂಪು. ನೋಡಲೇ ಬೇಕೆನ್ನುವಷ್ಟು ಬಣ್ಣ. ಸೂರ್ಯ ಕಣ್ಮರೆಯಾಗುವಾಗ ಇಡೀ ಆಕಾಶವೇ ಕೆಂಬಣ್ಣದ ಓಕುಳಿ. ” ಕೆಂಪಾದವೋ ಎಲ್ಲಾ ಕೆಂಪಾದವೋ ” .ಎಲ್ಲರನ್ನೂ ಕೂಗಿ ಕರೆದು , ನೋಡಿ! ನೋಡಿ ! ಎನ್ನುವಷ್ಟು ಚೆಂದ.
ಇದು ಆಶ್ವೀಜ ಕಳೆದ ಕಾರ್ತೀಕದ ಆಕಾಶದ ವಿಶೇಷ. ಮಳೆಗಾಲ ಮುಗಿದು, ಹಾಗೆ ಛಳಿ ಪ್ರಾರಂಭದ ನಮ್ಮ ಆಕಾಶದ ವಾತಾವರಣವೇ ಈ ಭವ್ಯತೆಗೆ ಕಾರಣ. ಹಾಗಾದರೆ, ಈ ತಿಂಗಳು ಮಾತ್ರ ಇಷ್ಟು ಕೆಂಬಣ್ಣವೇ? ಅಂತ ಕೇಳಿದರೆ, ಹೌದು. ಮಳೆಗಾಲದಲ್ಲಿ ಈ ಚೆಂದ, ಇರುವುದೇ ಇಲ್ಲ. ಬರೇ ಬಿಳಿ. ಹಾಗೆಯೆ ಫೆಬ್ರವರಿ, ಮಾರ್ಚ್, ಎಪ್ರಿಲ್, ಮೇ ತಿಂಗಳುಗಳಲ್ಲಿ ಇಷ್ಟು ಕೆಂಬಣ್ಣ ವಿರುವುದಿಲ್ಲ. ಹಳದಿ ಮಿಶ್ರಿತ ಸೌಮ್ಯ ಕೆಂಪು. ಸೆಪ್ಟೆಂಬರ್ ಕಾಲದಲ್ಲಿ ಸೂರ್ಯಾಸ್ತ, ಅರಿಶಿನ ಬಣ್ಣ.
ಇಷ್ಟು ಮಾತ್ರವಲ್ಲ, ಆಶ್ವೀಜ, ಕಾರ್ತೀಕದ ಈ ಹುಣ್ಣಿಮೆಗಳ ಚಂದ್ರನಿಗೆ ಭವ್ಯ ವರ್ತುಲ ವೇರ್ಪಡಬಹುದು. ಹಾಗೂ ಈ ಕಾಲದಲ್ಲೇ ಮಧ್ಯಾಹ್ನದ ಸೂರ್ಯನಿಗೆ ಭವ್ಯ ವರ್ತುಲಾಕಾರದ ಕಾಮನಬಿಲ್ಲಿನ ಕೊಡೆ ಕಾಣಬಹುದು.ಇದೆಲ್ಲದಕ್ಕೂ ನಮ್ಮ ಭೂಮಿಯ ವಾತಾವರಣವೇ ಕಾರಣ. ತೇವ ಮಿಶ್ರಿತ ವಾತಾವರಣದಲ್ಲಿ ಸೂರ್ಯನ ಬೆಳಕು ಚೆದುರಿ, ಈ ಭವ್ಯತೆಯನ್ನು ಮಾಡುತ್ತದೆ. ಸರ್ ಸಿ ವಿ ರಾಮನ್ ರಿಗೆ ಇದೇ ಬಣ್ಣದೋಕುಳಿಯೇ ಹೊಸ ಹೊಸ ಚಿಂತನೆಗೆ ಕಾರಣವಾಯಿತು. ಅವರ ನೋಬೆಲ್ ಪ್ರಶಸ್ತಿಗೂ ಮೂಲ ಕಾರಣವಾಯಿತು.
ಸಮುದ್ರತೀರದಲ್ಲಿ ಹಾಗೂ ಪಶ್ಚಿಮ ಘಟ್ಟದ ಎತ್ತರದ ಪ್ರದೇಶಗಳಲ್ಲಿ , ಈ ಕೆಲದಿನಗಳ ಪ್ರಶಾಂತ ಸಂಜೆ, ಆಕಾಶದ ಹೊಸ ಹೊಸ ಚಿತ್ತಾರಗಳಿಂದ, ಯಾರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ರಾತ್ರಿಯ ನೀಲಾಕಾಶದ ನಕ್ಷತ್ರಗಳೂ , ಈಗ ಬಲು ಚೆಂದ. ಈ ಎಲ್ಲಾ ಸೊಬಗು ನಮಗೆ ಮಾತ್ರ. ನಮ್ಮ ಭೂಮಿಯವರಿಗೆ ಮಾತ್ರ. ಬೇರೆ ಯಾವಗ್ರಹಗಳಲ್ಲೂ ವಾತಾವರಣವಿಲ್ಲದೇ ಇರುವುದರಿಂದ, ಈ ಬಣ್ಣದ ಚಿತ್ತಾರ ಇಲ್ಲವೇ ಇಲ್ಲ. ಬೇಕೆಂದಾಗ ಸಿಗದ ಈ ಸೊಬಗನ್ನು ನೋಡಿ ಆನಂದಿಸಬೇಕು.
ಡಾ. ಎ. ಪಿ. ಭಟ್, ಉಡುಪಿ.