ತಾನು ಮಾಡಿದ ಯೋಜನೆಗಳು ಮಾತ್ರ ಜನರಿಗಾಗಿ ಎನ್ನುವ ಬಿಜೆಪಿಯ ಮನಸ್ಥಿತಿ ದೇಶದ ಅಭಿವೃದ್ಧಿಗೆ ಮಾರಕ- ಕಾಂಗ್ರೆಸ್

ಉಡುಪಿ: ಗ್ಯಾರೆಂಟಿ ಯೋಜನೆಗಳನ್ನು ಉಳಿಸಿಕೊಳ್ಳಲು ರಾಜ್ಯ ಸರಕಾರ ಪೆಟ್ರೋಲ್ ಹಾಗೂ ಡಿಸೇಲ್ ದರವನ್ನು ಹೆಚ್ಚಳ ಮಾಡಿದೆ ಎಂದು ಆರೋಪಿಸುವ ಬಿಜೆಪಿಗೆ ತನ್ನ ಅಧಿಕಾರದ ಅವಧಿಯಲ್ಲಿ ಇದೇ ಪೆಟ್ರೋಲ್ ಬೆಲೆ ರೂ.75 ರಿಂದ ರೂ.110 ಆದಾಗ ಗ್ಯಾಸ್ ಸಿಲಿಂಡರ್ ಬೆಲೆ ರೂ 435 ರಿಂದ ರೂ.1150 ಆದಾಗ ಬೆಲೆ ಏರಿಕೆ ಎಂದು ಯಾಕೆ ಕಂಡು ಬಂದಿಲ್ಲ. ಮೋದಿಗಾಗಿ ಪೆಟ್ರೋಲ್ ಬೆಲೆ ರೂ 1000 ಆದರೂ ಅಡ್ಡಿ ಇಲ್ಲ ಅಂದವರು ಇಂದು ಪೆಟ್ರೋಲ್’ ಬೆಲೆ 3 ರೂ. ಹೆಚ್ಚಳಗೊಂಡಾಗ ಪ್ರತಿಭಟನೆ ಮಾಡುವುದು ನೋಡಿದರೆ ಅಯ್ಯೋ ಪಾಪ ಎಣಿಸುತ್ತದೆ ಬಿಜೆಪಿಗರು ತಮ್ಮ ಅವಧಿಯಲ್ಲಿ ಆದ ಬೆಲೆ ಏರಿಕೆಯನ್ನು ಅಭಿವೃದ್ಧಿಗಾಗಿ ಎಂದು ಸಮರ್ಥಿಸಿಕೊಂಡಿರುವುದನ್ನು ಜನತೆ ಇನ್ನೂ ಮರೆತಿಲ್ಲ.

ಅಂದು ಅಭಿವೃದ್ಧಿಗಾಗಿ ಅಂದವರಿಗೆ ಈಗ ಸರಕಾರ ಮಾಡಿದ ಮೂರು ರೂಪಾಯಿ ಏರಿಕೆಯನ್ನು ಅಭಿವೃದ್ಧಿಗಾಗಿ ಎಂದು ಏಕೆ ಪರಿಗಣಿಸಬಾರದು. ಬಿಜೆಪಿ ಅವಧಿಯಲ್ಲಿ ಡೀಸೆಲ್, ಪೆಟ್ರೋಲ್ ಹಾಗೂ ಗ್ಯಾಸ್ ಸಿಲಿಂಡರ್ ದರಗಳು  ಏರಿಕೆ ಕಂಡಿಲ್ಲವೇ. ಆಗ ಬಿಜೆಪಿಗೆ ಜನರ ಕಾಳಜಿ ಏಕಿರಲಿಲ್ಲ. ಜನರ ಸಂಕಷ್ಟವನ್ನು ಅರಿಯುವಲ್ಲಿ ಬಿಜೆಪಿ ಯಾಕೆ ಮುತುವರ್ಜಿ ವಹಿಸಲಿಲ್ಲˌಈಗ ವಿರೋಧ ಪಕ್ಷದಲ್ಲಿ ಇದ್ದೇವೆ ಎನ್ನುವ ಉದ್ದೇಶದಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.

ಕೇಂದ್ರ ಸರಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 9.1 ರೂಪಾಯಿದಿಂದ 32.98ಕ್ಕೆ, ಡೀಸೆಲ್ ಮೇಲಿನ ಸುಂಕವನ್ನು 3.45 ದಿಂದ 31 ಕ್ಕೆ ಹೆಚ್ಚಿಸಿದಾಗ ಬಿಜೆಪಿಯು ಯಾವ ಪ್ರತಿಭಟನೆಯನ್ನು ಮಾಡದೆ ಜನತೆಯನ್ನು ವಂಚಿಸಿಲ್ಲವೇ. ಕೇಂದ್ರದ ಬಿಜೆಪಿಯು ಅಸಮರ್ಪಕ ಜಿಎಸ್‌ಟಿಯನ್ನು ಜನರ ಮೇಲೆ ಹೇರಿ, ವಿವಿಧ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿಲ್ಲವೇ. ಇದರ ಬಗ್ಗೆ ಬಿಜೆಪಿಯ ಮೌನ ಅದರ ದ್ವಂದ್ವ ನಿಲುವನ್ನು ಪ್ರತಿಬಿಂಬಿಸುತ್ತದೆ. ತಾನು ಮಾಡಿದ ಯೋಜನೆಗಳು ಮಾತ್ರ ಜನರಿಗಾಗಿ ಎನ್ನುವ ಬಿಜೆಪಿಯ ಮನಸ್ಥಿತಿ ದೇಶದ ಅಭಿವೃದ್ಧಿಗೆ ಮಾರಕ. ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಹಿನ್ನಡೆ ಕಂಡ ಬಿಜೆಪಿ ಇನ್ನಾದರೂ ಜನರ ಚಿಂತನೆಗೆ ಒತ್ತು ಕೊಡುವಂತಾಗಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಬಿಜೆಪಿಯ ದ್ವಂದ ನಿಲುವನ್ನು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!