ದೇಶಾದ್ಯಂತ ‘ರಿಲಯನ್ಸ್ ಜಿಯೋ’ ಸರ್ವರ್ ಡೌನ್- ನೆಟ್ ವರ್ಕ್ ಸಿಗದೆ ಬಳಕೆದಾರರ ಪರದಾಟ
ನವದೆಹಲಿ: ದೇಶಾದ್ಯಂತ ಜಿಯೋ ಸರ್ವರ್ ಡೌನ್ ಆಗಿದೆ. ವಾಟ್ಸಾಪ್, ಇನ್ಸ್ಟಾಗ್ರಾಮ್, ಎಕ್ಸ್, ಸ್ನ್ಯಾಪ್ಚಾಟ್, ಯೂಟ್ಯೂಬ್ ಮತ್ತು ಗೂಗಲ್ ಸೇರಿದಂತೆ ಎಲ್ಲಾ ದೈನಂದಿನ ಬಳಕೆಯ ಅಪ್ಲಿಕೇಶನ್ ಪ್ರವೇಶಿಸಲು ಸಾಧ್ಯವಾಗದ ಕಾರಣ ದೇಶಾದ್ಯಂತ ಬಳಕೆದಾರರು ಜಿಯೋ ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರುತ್ತಿದ್ದಾರೆ.
ಸರ್ವರ್‌ಗಳ ಮೇಲೆ ನಿಗಾ ಇಡುವ ಡೌನ್‌ಡಿಟೆಕ್ಟರ್ ಸಂಸ್ಥೆ ವರದಿ ಪ್ರಕಾರ ಶೇ.54ರಷ್ಟು ಗ್ರಾಹಕರು ಮೊಬೈಲ್ ಇಂಟರ್‌ನೆಟ್ ಸಮಸ್ಯೆ ಬಗ್ಗೆ ದೂರಿದರೆ, ಶೇ.38ರಷ್ಟು ಜಿಯೋ ಬಳಕೆದಾರರು ಜಿಯೋ ಫೈಬರ್ ಹಾಗೂ ಶೇ.7ರಷ್ಟು ಗ್ರಾಹಕರು ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಬಗ್ಗೆ ದೂರಿದ್ದಾರೆ ಎಂದು ತಿಳಿಸಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ ಸೇರಿ ದೇಶದ ಮೂಲೆ ಮೂಲೆಗಳ ಗ್ರಾಹಕರು ಎಕ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಇಂಟರ್‌ನೆಟ್, ನೆಟ್‌ವರ್ಕ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸೇರಿ ದೇಶಾದ್ಯಂತ ರಿಲಯನ್ಸ್ ಜಿಯೋ ನೆಟ್‌ವರ್ಕ್ ಡೌನ್ ಆಗಿದ್ದು, ನೆಟ್‌ವರ್ಕ್ ಇಲ್ಲದೆ, ಇಂಟರ್‌ನೆಟ್ ಇಲ್ಲದೆ ಜನರ ಪರದಾಡುತ್ತಿದ್ದಾರೆ. ಮೊಬೈಲ್ ಇಂಟರ್‌ನೆಟ್ , ಜಿಯೋ ಫೈಬರ್, ಮೊಬೈಲ್ ನೆಟ್‌ವರ್ಕ್ ಸೇರಿ ಗ್ರಾಹಕರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕುರಿತು ಎಕ್ಸ್ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಇಂಟರ್‌ನೆಟ್, ನೆಟ್‌ವರ್ಕ್ ಸಮಸ್ಯೆ ಬಗ್ಗೆ ಇದುವರೆಗೆ ರಿಲಯನ್ಸ್ ಜಿಯೋ ಪ್ರತಿಕ್ರಿಯೆ ನೀಡಿಲ್ಲ.
ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಜಿಯೋ ಸಮಸ್ಯೆಯಾಗಿದೆ. ಇನ್ನೂ ಕೆಲವರು, ಇಂಟರ್‌ನೆಟ್ ಕನೆಕ್ಷನ್ ಇದೆ. ಆದರೆ, ದಿನ ನಿತ್ಯ ಬಳಸುವ ಫೇಸ್‌ಬುಕ್, ವಾಟ್ಸ್ಯಾಪ್, ಜಿಯೋ ಟಿವಿ ಸೇರಿ ಹಲವು ಅಪ್ಲಿಕೇಶನ್‌ಗಳನ್ನು ಓಪನ್ ಮಾಡಲು ಆಗುತ್ತಿಲ್ಲ ಎಂಬುದಾಗಿ ತಿಳಿದುಬಂದಿದೆ. ದೇಶಾದ್ಯಂತ ಕೋಟ್ಯಂತರ ಜನ ಜಿಯೋ ಸಿಮ್, ಜಿಯೋ ಫೈಬರ್‌ಅನ್ನು ಬಳಸುವ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಜನ ದೂರಿದ್ದಾರೆ.