ಮಣಿಪಾಲ ಜ್ಞಾನಸುಧಾ ಲೋಕಾರ್ಪಣೆ: 30.98 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ

Oplus_131072

ಉಡುಪಿ: ಜೀವನದಲ್ಲಿ ಯಾವುದು ಅಸಾಧ್ಯವಲ್ಲ. ಯಾವ ಕ್ಷೇತ್ರದಲ್ಲಾದರೂ ಬದ್ಧತೆ, ಸಂಕಲ್ಪ ಹಾಗೂ ಕರ್ತವ್ಯ ಪ್ರಜ್ಞೆ ಇದ್ದರೆ ಯಶಸ್ಸು ಸಾಧ್ಯ. ಡಾ.ಸುಧಾಕರ್ ಶೆಟ್ಟಿಯವರು ದೂರದೃಷ್ಟಿಯುಳ್ಳ ಸಾಧಕ ಮತ್ತು ಶ್ರೇಷ್ಠ ಶಿಕ್ಷಣ ತಜ್ಞ ಅವರ ಶೈಕ್ಷಣಿಕ ಕಾಳಜಿ ಅಭಿನಂದನಾರ್ಹ ಎಂದು ಮಣಿಪಾಲ್ ಗ್ರೂಪ್‌ನ ಅಧ್ಯಕ್ಷರಾದ ಟಿ. ಸುಧಾಕರ್ ಪೈ ನುಡಿದರು.

ಅವರು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ಮಣಿಪಾಲದ ವಿದ್ಯಾನಗರದಲ್ಲಿ ಪ್ರಾರಂಭಗೊಂಡ ಮಣಿಪಾಲ ಜ್ಞಾನಸುಧಾ ಪ.ಪೂ. ಕಾಲೇಜನ್ನು ಹಾಗೂ ಶಾಂತಿ ರಮೇಶ್ ಪೈ ಓಪನ್ ಆಡಿಟೋರಿಯಂನ್ನು ಉದ್ಘಾಟಿಸಿ, ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾ ಸಂಸ್ಥೆಯೊಂದನ್ನು ಕಟ್ಟಿ ಸಂಸ್ಥೆಗೆ ದಾಖಲಾದ ಪ್ರಾರಂಭದಲ್ಲಿ ವಿದ್ಯಾರ್ಥಿ ವೇತನ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ವಂದನೀಯ ಎಂದು ಸಂಸ್ಥೆಯ ಆಡಳಿತ ವಿಭಾಗವನ್ನು ಉದ್ಘಾಟಿಸಿದ ಉಡುಪಿ ಡಿಡಿಪಿಯು ಮಾರುತಿಯವರು ಅಭಿಪ್ರಾಯ ಪಟ್ಟರು.

ಮುಖ್ಯ ಅಭ್ಯಾಗತರಾಗಿ ಗಣಕಯಂತ್ರ ಪ್ರಯೋಗಶಾಲೆಯನ್ನು ಉದ್ಘಾಟಿಸಿದ ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶ್‌ಪಾಲ್ ಸುವರ್ಣ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಕೊಡುಗೆ ಅನನ್ಯವಾದುದು. ಮಣಿಪಾಲ ಇಡೀ ವಿಶ್ವದ ಮನಸ್ಸನ್ನು ಗೆಲ್ಲುವಂತೆ ಮಾಡಿದೆ. ಇದಕ್ಕೆ ಇನ್ನೊಂದು ಸೇರ್ಪಡೆ ಮಣಿಪಾಲ ಜ್ಞಾನಸುಧಾ. ಈಗಾಗಲೇ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಕೇವಲ ಬೋಧನೆಗೆ ಮಾತ್ರ ಸೀಮಿತವಾಗದೆ ವಿದ್ಯಾರ್ಥಿಗಳಿಗೆ ಮೌಲ್ಯಯುತ ಜೀವನದ ಅಡಿಪಾಯವನ್ನು ಒದಗಿಸುತ್ತಿರುವುದು ಗೌರವಾರ್ಹವಾಗಿದೆ ಎಂದರು.

ಗುಜರಾತ್‌ನ ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈ.ಲಿ.ನ ಮ್ಯಾನೆಜಿಂಗ್ ಡೈರೆಕ್ಟರ್ ಶಶಿಧರ್ ಶೆಟ್ಟಿ ಸರಸ್ವತಿ ದೇವಿಯ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಅವರು ಜ್ಞಾನಸುಧಾಕ್ಕೆ ಸೇರಿದ ವಿದ್ಯಾರ್ಥಿ ಅತ್ಯುತ್ತಮನಾಗಿ ಹೊರಬರುತ್ತಾನೆ ಎನ್ನುವುದಕ್ಕೆ ಪೋಷಕನಾದ ನಾನೇ ಸಾಕ್ಷಿ. ವಿದ್ಯಾ ಸಂಸ್ಥೆಯ ಏಳಿಗೆಯಲ್ಲಿ ಪೋಷಕರು ಸಹಕಾರಿಗಳಾಗಿ ನಿಲ್ಲಬೇಕು. ಸಾಧನೆಗೆ ರ‍್ಯಾಂಕ್ ಒಂದೇ ಮುಖ್ಯವಲ್ಲ, ಯಶಸ್ಸು ಎಂಬುದು ನಮ್ಮ ಕೈಯಲ್ಲಿದೆ. ಕಷ್ಟ-ಸುಖಗಳನ್ನು ಬಾಳಿನಲ್ಲಿ ಸಹಜವಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದರು.

ಸಂಸ್ಥೆಯ ರಸಾಯನ ಶಾಸ್ತç ವಿಭಾಗದ ಪ್ರಯೋಗಶಾಲೆಯನ್ನು ಬಳ್ಳಾರಿ ಜ್ಞಾನಾಮೃತ ಪಿ.ಯು ಕಾಲೇಜಿನ ಅಧ್ಯಕ್ಷರಾದ ಎಂ.ಜಿ.ಗೌಡ್, ಜೀವಶಾಸ್ತ್ರ ಪ್ರಯೋಗಶಾಲೆಯನ್ನು ಎ.ಪಿ.ಜಿ.ಇ.ಟಿ.ಟ್ರಸ್ಟ್ನ ಆಡಳಿತ ಮಂಡಳಿ ಸದಸ್ಯರಾದ ಗಣಪತಿ ಪೈ, ಭೌತಶಾಸ್ತ್ರ ಪ್ರಯೋಗಶಾಲೆಯನ್ನು ಮಣಿಪಾಲ್ ಹೈಸ್ಕೂಲ್‌ನ ಸಂಚಾಲಕ ಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಎಚ್.ಪಿ.ಆರ್ ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಸಾದ್ ರೈ, ಎಂ.ಜೆ.ಸಿ.ಯ ಪ್ರಾಂಶುಪಾಲರಾದ ಡಾ.ರೂಪಾ ಭಟ್, ಟ್ರಸ್ಟಿ ಅನಿಲ್ ಕುಮಾರ್ ಜೈನ್, ಸಿ.ಎ. ನಿತ್ಯಾನಂದ ಪ್ರಭು, ಆಡಳಿತ ಮಂಡಳಿ ಸದಸ್ಯ ಶಾಂತಿರಾಜ್ ಹೆಗ್ಡೆ, ಕಾರ್ಕಳ ಜ್ಞಾನಸುಧಾ ಸಿಇಒ ಹಾಗೂ ಪ್ರಾಂಶುಪಾಲ ದಿನೇಶ್ ಕೊಡವೂರ್, ಉಡುಪಿ ಜ್ಞಾನಸುಧಾ ಪ್ರಾಂಶುಪಾಲ ಸಂತೋಷ್ ಉಪಸ್ಥಿತರಿದ್ದರು.

ಇದೇ ಸಂದರ್ಭ ಉಡುಪಿ ಜ್ಞಾನಸುಧಾ ಪಿ.ಯು. ಕಾಲೇಜಿನ ಜೆಇಇ ಮೈನ್, ನೀಟ್‌ನ 28 ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ, ತಲಾ ಒಂದು ಸಾವಿರ ರೂ.ಗಳನ್ನು ನೀಡಿ ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿನಿ ರೋಶ್ನಿ ಎಂ.ಪಿ. ಅಭಿನಂದನಾ ನುಡಿಗಳನ್ನಾಡಿದರು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನವತಿಯಿಂದ ಮಣಿಪಾಲ ಜ್ಞಾನಸುಧಾ ಹಾಗೂ ಉಡುಪಿ ಜ್ಞಾನಸುಧಾ ಕಾಲೇಜಿಗೆ ಪ್ರಥಮ ಪಿಯುಸಿ ದಾಖಲಾತಿ ಹೊಂದಿದ 75 ಅರ್ಹ ವಿದ್ಯಾರ್ಥಿಗಳಿಗೆ 30.98 ಲಕ್ಷ ರೂ. ವಿದ್ಯಾರ್ಥಿವೇತನ ನೀಡಲಾಯಿತು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಶಮಿತಾ ಮೂಡುಬೆಳ್ಳೆ ನಿರೂಪಿಸಿ, ಮಣಿಪಾಲ್ ಜ್ಞಾನಸುಧಾದ ಪ್ರಾಂಶುಪಾಲ ಗಣೇಶ ಶೆಟ್ಟಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!