ಕೇರಳ: ತ್ರಿಶೂರ್, ಪಾಲಕ್ಕಾಡ್‌ನಲ್ಲಿ ಲಘು ಭೂಕಂಪನ
ತ್ರಿಶೂರ್: ಇಂದು ಬೆಳಗ್ಗೆ ತ್ರಿಶೂರ್ ಹಾಗೂ ಪಾಲಕ್ಕಾಡ್ ಜಿಲ್ಲೆಯ ಕೆಲವು ಭಾಗಗಳಲ್ಲಿ ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆಯ ಲಘು ಭೂಕಂಪನ ಸಂಭವಿಸಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರದ ಪ್ರಕಾರ, ಈ ಪ್ರಾಂತ್ಯಗಳಲ್ಲಿ ಇಂದು ಬೆಳಗ್ಗೆ 8.15ರ ಸುಮಾರಿಗೆ 3.0 ತೀವ್ರತೆಯ ಭೂಕಂಪನವು ದಾಖಲಾಗಿದೆ.
ನಾಲ್ಕು ಸೆಕೆಂಡ್ ಗಳ ಕಾಲ ನಡುಕದ ಅನುಭವವಾಗಿದೆಯಾದರೂ, ತಕ್ಷಣಕ್ಕೆ ಯಾವುದೇ ಹಾನಿ ಅಥವಾ ಗಾಯದ ವರದಿಗಳಾಗಿಲ್ಲ ಎಂದು ತ್ರಿಶೂರ್ ಜಿಲ್ಲಾಡಳಿತವು ತಿಳಿಸಿದೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.
ಇದೇ ವೇಳೆ, ಕುನ್ನಂಕುಲಂ, ಎರುಮಪ್ಪೆಟ್ಟಿ ಹಾಗೂ ಪಝಂಜಿ ಪ್ರಾಂತ್ಯಗಳು ಹಾಗೂ ಪಾಲಕ್ಕಾಡ್ ಜಿಲ್ಲೆಯ ಭಾಗಗಳಲ್ಲಿ ನಡುಕದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಕುರಿತು ಮತ್ತಷ್ಟು ಅಧ್ಯಯನ ನಡೆಸಲು ರಾಜ್ಯ ಭೌಗೋಳಿಕ ಇಲಾಖೆ ಹಾಗೂ ಇನ್ನಿತರರರು ಭೂಕಂಪ ಸಂಭವಿಸಿದ ಪ್ರಾಂತ್ಯಗಳಿಗೆ ಧಾವಿಸಿದ್ದಾರೆ ಎಂದು ಹೇಳಲಾಗಿದೆ.