ಪಶ್ಚಿಮ ಘಟ್ಟದಲ್ಲಿ ಮಾನವನ ಚಟುವಟಿಕೆ ಹೆಚ್ಚಳ ಆತಂಕ: ದಿನೇಶ್ ಹೊಳ್ಳ
ಮಂಗಳೂರು: ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲೂ ಅಧಿಕ ತಾಪಮಾನ ದಾಖಲಾಗುತ್ತಿದ್ದು, ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ತಾಪಮಾನ ಏರಿಕೆಯಾಗುತ್ತಿದೆ. ಇದರಿಂದಾಗಿ ನಗರ ಪ್ರದೇಶದಲ್ಲಿ ದಾಖಲಾಗುವ ಸುಮಾರು 30 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನವು ಪಶ್ಚಿಮಘಟ್ಟ ಪ್ರದೇಶಗಳಲ್ಲೂ ಕಂಡು ಬರುತ್ತಿದೆ. ಹಚ್ಚ ಹಸಿರು, ನಿತ್ಯ ಹರಿದ್ವರ್ಣದಿಂದ ಕೂಡಿದ ಘಟ್ಟ ಪ್ರದೇಶದಲ್ಲಿ ತಾಪಮಾನ ಹೆಚ್ಚಳದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈಚಿನ ವರ್ಷಗಳಲ್ಲಿ ಘಟ್ಟದ ಮೇಲೆ ಮಾನವ ಪ್ರಹಾರ ಹೆಚ್ಚಾಗಿದೆ. ಅಭಿವೃದ್ಧಿ, ಪ್ರವಾಸೋದ್ಯಮ ಹೆಸರಿನಲ್ಲಿ ಕಾಡು ನಾಶ, ಅಣೆಕಟ್ಟೆ, ಹೋಂ ಸ್ಟೇ, ರಸ್ತೆ ಅಭಿವೃದ್ಧಿ, ಸುರಂಗ ಮಾರ್ಗ ಮತ್ತಿತರ ಚಟುವಟಿಕೆಗಳು ನಡೆಯುತ್ತಿವೆ ಎನ್ನುತ್ತಾರೆ ಘಟ್ಟ ಪ್ರದೇಶದ ಆಸುಪಾಸಿನ ಜನತೆ. ‘ಪಶ್ಚಿಮ ಘಟ್ಟದ ಮೇಲ್ಮೈ ಹೊದಿಕೆ ಬರಿದಾಗುತ್ತಾ, ಅಡವಿ ವ್ಯಾಪ್ತಿ ಕಡಿಮೆ ಆಗುತ್ತಿದ್ದು ತಾಪ ಹೆಚ್ಚಾಗುತ್ತಿದೆ. ಮನುಷ್ಯನ ಶರೀರಕ್ಕೆ ಚರ್ಮದ ರಕ್ಷಣೆಯಂತೆ ಪಶ್ಚಿಮ ಘಟ್ಟಕ್ಕೆ ಹುಲ್ಲುಗಾವಲು ಮತ್ತು ಶೋಲಾ ಅಡವಿ ರಕ್ಷಾ ಕವಚವಾಗಿದೆ. ಈಚೆಗೆ ಮನುಷ್ಯರ ಅತಿಕ್ರಮಣ ಹೆಚ್ಚಾಗುತ್ತಾ, ಸರ್ಕಾರದ ಯೋಜನೆಗಳು, ಅರಣ್ಯ ಅತಿಕ್ರಮಣ, ರೆಸಾರ್ಟ್‌ಗಳು, ಟಿಂಬರ್ ಮಾಫಿಯಾ ಇತ್ಯಾದಿಗಳು ನದಿಮೂಲಕ್ಕೆ ಏಟು ನೀಡುತ್ತಿವೆ. ಇದರಿಂದ 3 ವರ್ಷಗಳಲ್ಲಿ ಜಲ ಸ್ಫೋಟ, ಭೂಕುಸಿತ, ಪ್ರವಾಹ ಹೆಚ್ಚಾಗುತ್ತಿವೆ’ ಎಂದು ಪರಿಸರ ಪ್ರೇಮಿ ದಿನೇಶ್ ಹೊಳ್ಳ ದಾಖಲಿಸಿದ್ದಾರೆ. ಹುಲ್ಲು ಮತ್ತು ಕಾಡುಗಳು ಸೂರ್ಯನ ಕಿರಣವನ್ನು ಸೋಸಿ ಬಿಡುತ್ತವೆ. ಆಗ ತಾಪ ಕಡಿಮೆಯಾಗಿ, ಜಲಸಂರಕ್ಷಣೆಯೂ ಆಗುತ್ತಿತ್ತು. ಆದರೆ, ಮಾನವನ ಅತಿಕ್ರಮಣದಿಂದ ಹುಲ್ಲು, ಕಾಡು ನಾಶವಾಗಿ, ತಾಪ ಹೆಚ್ಚಾಗುತ್ತಿದೆ. ‘ಪಶ್ಚಿಮ ಘಟ್ಟದಲ್ಲಿ ಭೂ ಕುಸಿತಗಳಿಂದ ಮೇಲ್ಮೈ ಪದರದ ಹಸಿರು ಹೊದಿಕೆ ಕಡಿಮೆ ಆಗುತ್ತದೆ. ಮೆದು ಮಣ್ಣು ಕರಗುತ್ತಾ ಗಡಸು ಮಣ್ಣು ಮೇಲ್ಮೈ ಪದರ ಆಗಿಬಿಡುತ್ತದೆ. ಮೇಲ್ಭಾಗದಲ್ಲಿರುವ ಮಣ್ಣು, ಕಲ್ಲಿಗೆ ಸೂರ್ಯನ ಶಾಖ ನೇರವಾಗಿ ಬಿದ್ದಾಗ ಶಾಖ ಹೆಚ್ಚಾಗುತ್ತದೆ. ತಾಪಹೆಚ್ಚಾದಷ್ಟೂ ನೀರಿನ ಒರತೆ ಕಡಿಮೆ ಆಗುತ್ತದೆ’ ಎಂದು ಅವರು ಅಪಾಯವನ್ನು ಸೂಚಿಸುತ್ತಾರೆ. ‘ಇದರ ಪರಿಣಾಮದಿಂದ ವನ್ಯಜೀವಿಗಳು ಈಗಾಗಲೇ ಊರಿಗೆ ಬರುತ್ತಿವೆ. ಈ ಬಗ್ಗೆ ಬಹಳ ಗಂಭೀರವಾಗಿ ಚಿಂತಿಸಬೇಕಾದ ಮತ್ತು ಇದಕ್ಕೆ ಸಕಾರಾತ್ಮಕ ನಿಲುವು ತೆಗೆದುಕೊಳ್ಳುವ ಅಗತ್ಯ ಇದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಜನವಸತಿ ಪ್ರದೇಶದಲ್ಲಿ ಹೆಚ್ಚು ಪರಿಶೀಲನೆ: ಸಹಜವಾಗಿ ಜನವಸತಿ ಪ್ರದೇಶದಲ್ಲಿ ತಾಪಮಾನವನ್ನು ದಾಖಲಿಸಲಾಗುತ್ತದೆ. ಅರಣ್ಯ ಪ್ರದೇಶಗಳಲ್ಲಿ ವಿಶೇಷ ಅಧ್ಯಯನಗಳಿದ್ದಾಗ ಮಾತ್ರ ತಾಪಮಾನವನ್ನು ದಾಖಲಿಸುತ್ತೇವೆ. ಜಾಗತಿಕವಾಗಿ ತಾಪಮಾನದಲ್ಲಿ ಏರಿಕೆ ಇದೆ. ಆದರೆ, ಸ್ಥಳೀಯವಾಗಿ ಪರಿಸರ ಅಧ್ಯಯನ ನಡೆಸುತ್ತಿರುವವರು ದಾಖಲೆ ನೀಡಬಹುದು’ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ತಾಪಮಾನ ಅಧ್ಯಯನಗಳು ನಡೆದಿಲ್ಲ: ನಮ್ಮ ಅರಣ್ಯ ವ್ಯಾಪ್ತಿಯಲ್ಲಿ ವ್ಯತ್ಯಯ ಆಗಿಲ್ಲ. ಆದರೆ, ಅರಣ್ಯ ಪ್ರದೇಶದಲ್ಲಿ ಹವಾಮಾನ ವ್ಯತ್ಯಯದ ಬಗ್ಗೆ ಯಾವುದೇ ಅಧ್ಯಯನಗಳು ನಡೆದಿಲ್ಲ. ಜಾಗತಿಕ ತಾಪಮಾನ ಹೆಚ್ಚಳದ ಪರಿಣಾಮ ಹಾಗೂ ಸ್ಥಳೀಯ (ಮೈಕ್ರೊ) ಪ್ರಭಾವಗಳನ್ನೂ ನಿರಾಕರಿಸುವಂತಿಲ್ಲ. ಹೀಗಾಗಿ, ತಾಪಮಾನದ ವ್ಯತ್ಯಯದ ಬಗ್ಗೆ ನಿರ್ದಿಷ್ಟವಾಗಿ ಪ್ರತಿಕ್ರಿಯಿಸುವುದು ಕಷ್ಟ’ ಎಂದು ಅರಣ್ಯ ಸಂರಕ್ಷಣಾಧಿಕಾರಿ ಎಸ್. ಕರಿಕಾಲನ್ ಹೇಳುತ್ತಾರೆ. |