ಜೂ.16ಕ್ಕೆ ರಂಗಭೂಮಿಯಿಂದ ಆನಂದೋತ್ಸವ-2024: ಆನಂದ್ ಕುಂದರ್‌ಗೆ ‘ಸಂಸ್ಕೃತಿ ಸಾಧಕ ಪ್ರಶಸ್ತಿ’
ಉಡುಪಿ, ಜೂ.13: ಉಡುಪಿಯ ರಂಗಭೂಮಿ ಸಂಸ್ಥೆ ಕುತ್ಪಾಡಿ ಆನಂದ ಗಾಣಿಗರ ನೆನಪಿನಲ್ಲಿ ಪ್ರತಿ ವರ್ಷ ನಡೆಸುವ ರಂಗಭೂಮಿ ಆನಂದೋತ್ಸವ ಈ ಬಾರಿ ಜೂ.16ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ ದಲ್ಲಿ ನಡೆಯಲಿದೆ ಎಂದು ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇದೇ ಸಂದರ್ಭದಲ್ಲಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಮೂಲಕ ನೀಡಲಾಗುವ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿಗೆ ಈ ಬಾರಿ ಕೋಟ ಮಣೂರಿನ ಗೀತಾನಂದ ಪ್ರತಿಷ್ಠಾನದ ಪ್ರವರ್ತಕ, ಉದ್ಯಮಿ ಆನಂದ ಸಿ.ಕುಂದರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಆನಂದೋತ್ಸವ-2024ನ್ನು ಜೂ.16ರ ಸಂಜೆ 5:45ಕ್ಕೆ ಅಂಬಲಪಾಡಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ.ಶಂಕರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರಕುಮಾರ ಕೋಟ, ಮಂಗಳೂರಿನ ನಾಟಕಕಾರ, ನಟ, ನಿರ್ದೇಶಕ ಶಶಿರಾಜ್ ರಾವ್ ಕಾವೂರು, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಪೂರ್ಣಿಮಾ ಹಾಗೂ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಭಾಗವಹಿಸಲಿದ್ದಾರೆ ಎಂದರು.
ಸಭಾ ಕಾರ್ಯಕ್ರಮದ ಬಳಿಕ ಮಂಗಳೂರಿನ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಸ್ತುತ ಪಡಿಸುವ ಕನ್ನಡ ನಾಟಕ ‘ನೆಮ್ಮದಿ ಅಪಾರ್ಟ್‌ಮೆಂಟ್ ಬ್ಲಾಕ್ ಬಿ’ ಪ್ರದರ್ಶನಗೊಳ್ಳಲಿದೆ. ಶಶಿರಾಜ್ ಕಾವೂರು ರಚನೆಯ ಈ ನಾಟಕವನ್ನು ಮೋಹನ ಚಂದ್ರ ಯು. ನಿರ್ದೇಶಿಸಿದ್ದಾರೆ ಎಂದು ಪ್ರದೀಪ್ ಚಂದ್ರ ಕುತ್ಪಾಡಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿಯ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು, ಎನ್. ರಾಜಗೋಪಾಲ್ ಬಲ್ಲಾಳ್, ಕೋಶಾಧಿಕಾರಿ ಯು. ಬೋಜ ಹಾಗೂ ತಲ್ಲೂರು ಟ್ರಸ್ಟ್‌ನ ಅಮಿತಾಂಜಲಿ ಕಿರಣ್ ಉಪಸ್ಥಿತರಿದ್ದರು.