ಉಡುಪಿ: ರಸ್ತೆ ಬದಿಯ ಅಣಬೆ ತಿಂದ ಮೂವರು ಅಸ್ವಸ್ಥ

Oplus_0

ಉಡುಪಿ, ಜೂ.13: ರಸ್ತೆ ಬದಿ ಬೆಳೆದ ಅಣಬೆಯನ್ನು ತಿಂದು ಮೂವರು ಅಸ್ವಸ್ಥಗೊಂಡು ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಲ್ಪೆ ಸಮೀಪದ ತೊಟ್ಟಂನಲ್ಲಿ ಬುಧವಾರ ರಾತ್ರಿ ನಡೆದಿದೆ.

ಅಸ್ವಸ್ಥಗೊಂಡವರನ್ನು ತೊಟ್ಟಂನಲ್ಲಿ ವಾಸವಾಗಿರುವ ಗದಗ ಮೂಲದ ಅಣ್ಣಪ್ಪ(45), ಸುಜಾತ(25) ಹಾಗೂ ಸುಜಾತ ಅವರ ಮಗಳು ಸಂಗೀತ(7) ಎಂದು ಗುರುತಿಸಲಾಗಿದೆ. ಇವರಲ್ಲಿ ಅಣ್ಣಪ್ಪ ಮತ್ತು ಸುಜಾತ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಹಾಗೂ ಸಂಗೀತ ಉಡುಪಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಿನಗೂಲಿ ಕೆಲಸ ಮಾಡಿಕೊಂಡಿರುವ ಇವರು, ರಾತ್ರಿ ವೇಳೆ ರಸ್ತೆ ಬದಿಯಲ್ಲಿದ್ದ ಅಣಬೆಯನ್ನು ತಿಂದಿದ್ದರು. ಇದರಿಂದ ಇವರು ತಡರಾತ್ರಿ ವೇಳೆ ತೀವ್ರ ಅಸ್ವಸ್ಥಗೊಂಡಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಆಂಬುಲೆನ್ಸ್ ಮೂಲಕ ಈ ಮೂವರನ್ನೂ ಉಡುಪಿಯ ಆಸ್ಪತ್ರೆಗೆ ದಾಖಲಿಸಿದೆ.

ತಕ್ಷಣ ವೈದ್ಯಾಧಿಕಾರಿಗಳು ನೀಡಿದ ಚಿಕಿತ್ಸೆಯಿಂದ ಸದ್ಯ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ರಸ್ತೆ ಇಕ್ಕೆಲಗಳಲ್ಲಿ ಕಾಣುವಂತಹ ಇಂತಹ ವಿಷಕಾರಿ ವಸ್ತುಗಳನ್ನು ಸೇವಿಸುವ ಮುನ್ನ ಎಚ್ಚರವಹಿಸಬೇಕು. ಇದರಿಂದಾಗಿ ಪ್ರಾಣಕ್ಕೂ ಅಪಾಯವಾಗುವ ಸಾಧ್ಯತೆ ಇದೆ ಎಂದು ಈಶ್ವರ ಮಲ್ಪೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!