ಹೆಬ್ರಿ: ಸೋಮೇಶ್ವರ- ಆಗುಂಬೆ ಭಾಗದಲ್ಲಿ ಕಾಡಾನೆ ಸಂಚಾರ
ಕಾರ್ಕಳ: ದ.ಕನ್ನಡ ಜಿಲ್ಲೆಗೆ ಸೀಮಿತವಾಗಿದ್ದ ಆನೆ ಹಾವಳಿ ಈಗ ಉಡುಪಿ ಜಿಲ್ಲೆಯಲ್ಲಿಯು ಸದ್ದಿಲ್ಲದೆ ಆರಂಭವಾಗಿದೆ.
ಹೆಬ್ರಿ ಸೋಮೇಶ್ವರ ನಾಡ್ಪಾಲು ಕೂಡ್ಲು ಆಗುಂಬೆ ಮಾರ್ಗವಾಗಿ ಸಾಗುವವರೆ ಹುಷಾರ್ . ಯಾಕೆಂದರೆ ಒಂಟಿ ಸಲಗ ಹೆಬ್ರಿ ಆಗುಂಬೆ ವ್ಯಾಪ್ತಿಯ ಸೋಮೇಶ್ವರ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿರುವುದು ಸ್ಥಳೀಯರಿಗೆ ಹಾಗೂ ರಸ್ತೆಯಲ್ಲಿ ಸಾಗುವ ಜನರ ನಿದ್ದೆಗೆಡಿಸಿದೆ.
ಕಳೆದ ನಾಲ್ಕು ದಿನಗಳಿಂದ ಹೆಬ್ರಿ ತಾಲೂಕಿನ ನಾಡ್ಪಾಲು ನೆಲ್ಲಿಕಟ್ಟೆ ಮೀನಾ ಪೂಜಾರ್ತಿ ಎಂಬವರ ಮನೆ ಬಳಿ ಆನೆ ರಾತ್ರಿ ವೇಳೆಯಲ್ಲಿ ದಾಳಿಮಾಡುತಿದ್ದು ಮರದಲ್ಲಿದ್ದ ಹಲಸು ಹಾಗೂ ತೆಂಗು, ಬಾಳೆ ಗಿಡಗಳು ನಾಶಮಾಡಿದೆ. ಆದರೆ ಮುಂಜಾವಿನಲ್ಲಿ ಆನೆ ಕಾಡಿಗೆ ಹೋಗಿ ತಪ್ಪಿಸಿಕೊಳ್ಳುತ್ತಿದೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಕಳೆದ ಬಾರಿ ಕಬ್ಬಿನಾಲೆ ಮುಂಡಾಣಿ ತಿಂಗಳೆ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಆನೆಯು ಅಲ್ಪಮಟ್ಟಿಗೆ ಕೃಷಿಗೆ ಹಾನಿಗೊಳಿಸಿತ್ತು. ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಈ ಒಂಟಿ ಸಲಗವು ಸುಳ್ಯದ ಕುಕ್ಕೆ ಸುಬ್ರಹ್ಮಣ್ಯದಿಂದ ಬೆಳ್ತಂಗಡಿ ಮೂಲಕ ನಾರಾವಿ, ಮಾಳ ಘಾಟ್ ಮೂಲಕ ವಾಲಿಕುಂಜ ಬೆಟ್ಟದ ಮೇಲಿನ ಕಬ್ಬಿನಾಲೆಯ ತಿಂಗಳಮಕ್ಕಿ, ತೆಂಗುಮಾರ್, ಕಿಗ್ಗ, ಬರ್ಕಣ ಮಲ್ಲಂದೂರು, ಆಗುಂಬೆ ಮೂಲಕ ನಗರ ಹೊಸನಗರ ವರೆಗೆ ಸಂಚರಿಸುತ್ತದೆ. ಈವರೆಗೆ ಯಾವುದೇ ಪ್ರಾಣ ಹಾನಿ ಮಾಡಿಲ್ಲ.
ಕಳೆದ ಇಪ್ಪತ್ತು ವರ್ಷಗಳ ಹಿಂದೆ ಹೆಬ್ರಿ ಸಮೀಪದ ಸಂತೆಕಟ್ಟೆ ಎಂಬಲ್ಲಿ ಒಂಟಿಸಲಗವು ಕೋಲಿನಮೂಲಕ ಹೊಡೆಯಲು ಹೋದ ಓರ್ವ ವ್ಯಕ್ತಿಯನ್ನು ಸೊಂಡಿಲಿನ ಮೂಲಕ ನೆಲಕ್ಕೆ ಬಿಸಾಡಿತ್ತು.
ಪ್ರವಾಸಿಗರೆ ಹುಷಾರು : ಕಬ್ಬಿನಾಲೆ ಫಾಲ್ಸ್ ಆಗುಂಬೆ ಸೂರ್ಯಾಸ್ತ ವೀಕ್ಷಣಾ ಪ್ರದೇಶದ, ಮಲ್ಲಂದೂರು ಬರ್ಕಣ ಫಾಲ್ಸ್ ಗಳಿಗೆ ಬರುವ ಪ್ರವಾಸಿಗರೆ ಎಚ್ಚರಿಕೆಯಿಂದ ಇರಬೇಕು. ಒಂಟಿಸಲಗವು ಅಲ್ಲಲ್ಲಿ ಕಾಣಿಸುತಿದೆ. ಅರಣ್ಯ ಇಲಾಖೆಯ ಮಾಹಿತಿಯನ್ನು ಆಧರಿಸಿ ಸಂಚರಿಸುವುದು ಒಳಿತು. ಅರಣ್ಯ ಇಲಾಖೆ ಸಹಕಾರ ಪಡೆದುಕೊಳ್ಳಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.