ಮಾಜಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಆತ್ಮಹತ್ಯೆ ಪ್ರಕರಣ: ಆರೋಪಿ ಅತುಲ್ ರಾವ್ ಖುಲಾಸೆ
ಉಡುಪಿ: 15 ವರ್ಷಗಳ ಹಿಂದೆ ನಡೆದ ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಠಿಸಿರುವ ಪ್ರಕರಣದ ಆರೋಪಿ ಅತುಲ್ ರಾವ್ ನನ್ನು ಉಡುಪಿ ಜಿಲ್ಲಾ ಎರಡನೇ ಹೆಚ್ಚವರಿ ನ್ಯಾಯಾಲಯ ಖುಲಾಸೆಗೊಳಿಸಿ ಬುಧವಾರ ಆದೇಶ ನೀಡಿದೆ.
2008ರ ಜೂ.10ರಂದು ಪದ್ಮಪ್ರಿಯ ಕರಂಬಳ್ಳಿಯ ಮನೆಯಿಂದ ನಾಪತ್ತೆಯಾಗಿದ್ದು, ಈ ವಿಚಾರದಲ್ಲಿ ರಘುಪತಿ ಭಟ್ ಬಾಲ್ಯ ಸ್ನೇಹಿತ, ಅದೇ ಊರಿನ ಅತುಲ್ ರಾವ್ ನಕಲಿ ದಾಖಲೆ ಸೃಷ್ಠಿಸಿ ಮೋಸ ಮಾಡಿರುವ ಬಗ್ಗೆ 2008ರ ಜೂ.19ರಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಸಿಓಡಿ ಅಧಿಕಾರಿಗಳು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಉಡುಪಿ ಸಿಜೆಎಂ ನ್ಯಾಯಾಲಯವು 2023ರ ನ.10ರಂದು ಆರೋಪಿ ಅತುಲ್ ರಾವ್ ಗೆ ಒಂದು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿತು. ಇದರ ವಿರುದ್ಧ ಅತುಲ್ ಡಿಸೆಂಬರ್ ತಿಂಗಳಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಹೆಗ್ಡೆ, ಆರೋಪಿ ಅತುಲ್ ನನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದರು. ಆರೋಪಿ ಪರ ನ್ಯಾಯವಾದಿಗಳಾದ ಅರುಣ್ ಬಂಗೇರ ಹಾಗೂ ಸ್ಟೀವನ್ ಲೂಯಿಸ್ ವಾದ ಮಂಡಿಸಿದ್ದರು.