ಕುವೈತ್: ಕಟ್ಟಡದಲ್ಲಿ ಅಗ್ನಿ ಅವಘಡ- 4 ಭಾರತೀಯರು ಸೇರಿ 41 ಮಂದಿ ಸಜೀವ ದಹನ
ಕುವೈತ್: ಇಲ್ಲಿನ ದಕ್ಷಿಣ ನಗರವಾದ ಮಂಗಾಫ್‌ನ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 41 ಸಜೀವ ದಹನವಾಗಿದ್ದಾರೆ ಎಂದು ದೇಶದ ಸರ್ಕಾರಿ ಮಾಧ್ಯಮ ತಿಳಿಸಿದೆ.
ವರದಿಗಳ ಪ್ರಕಾರ, ಈ ದುರಂತ ಘಟನೆಯಲ್ಲಿ ಕನಿಷ್ಠ ನಾಲ್ವರು ಭಾರತೀಯರು ಸಹ ಸಾವನ್ನಪ್ಪಿದ್ದಾರೆ. ಕಟ್ಟಡದಲ್ಲಿ ಮಲಯಾಳಂ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮೃತರಲ್ಲಿ ಇಬ್ಬರು ತಮಿಳುನಾಡಿನವರು ಮತ್ತು ಇಬ್ಬರು ಉತ್ತರ ಭಾರತದವರು. ಆದಾಗ್ಯೂ, ಇನ್ನೂ ಅಧಿಕಾರಿಗಳಿಂದ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ.
ಕುವೈತ್ ಆರೋಗ್ಯ ಸಚಿವಾಲಯ ಹೊರಡಿಸಿದ ಹೇಳಿಕೆಯ ಪ್ರಕಾರ, ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಹಲವಾರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಅಗ್ನಿ ದುರಂತದಲ್ಲಿ ಗಾಯಗೊಂಡವರಿಗೆ ಸರಿಯಾದ ವೈದ್ಯಕೀಯ ಸೇವೆಯನ್ನು ಒದಗಿಸಲು ವೈದ್ಯಕೀಯ ತಂಡಗಳು ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಸಚಿವಾಲಯ ಹೇಳಿದೆ.
ವರದಿಗಳ ಪ್ರಕಾರ, ಬುಧವಾರ ಮುಂಜಾನೆ 4:30ಕ್ಕೆ ಕಾರ್ಮಿಕ ಶಿಬಿರದ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವರು ಬೆಂಕಿಯನ್ನು ನೋಡಿ ಅಪಾರ್ಟ್‌ಮೆಂಟ್‌ಗಳಿಂದ ಹಾರಿ ಸಾವನ್ನಪ್ಪಿದರೆ, ಇನ್ನು ಕೆಲವರು ಸುಟ್ಟಗಾಯ ಮತ್ತು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.