ಬಡನಿಡಿಯೂರು ಪಿಡಿಓ ವರ್ಗಾವಣೆಗೆ ಆಗ್ರಹಿಸಿ ಪಂಚಾಯತ್‌ಗೆ ಮುತ್ತಿಗೆ
ಉಡುಪಿ, (ಉಡುಪಿ ಟೈಮ್ಸ್ ವರದಿ): ಬಡನಿಡಿಯೂರು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಪಂಚಾಯತ್ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಸುಮಾರು 6 ವರ್ಷದಿಂದ ಬಡನಿಡಿಯೂರು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಾಲತಿಯವರು ಜನರೊಂದಿಗೆ ದರ್ಪದಿಂದ ವರ್ತಿಸುತ್ತಿದ್ದು ಹಾಗೂ ಅನೇಕ ಭ್ರಷ್ಟಾಚಾರದ ಆರೋಪ ಕೂಡ ಇವರ ಮೇಲೆ ಇದೆ ಹಾಗಾಗಿ ಇವರನ್ನು ಆದಷ್ಟು ಬೇಗ ವರ್ಗಾವಣೆಗೊಳಿಸಿ ಅವರ ಜಾಗಕ್ಕೆ ಶೀಘ್ರವೇ ಬೇರೆ ಅಧಿಕಾರಿಯನ್ನು ನಿಯುಕ್ತಿಗೊಳಿಸಬೇಕಾಗಿ ಗ್ರಾಮಸ್ಥರು ಪ್ರತಿಭಟನೆಯ ಮೂಲಕ ಮನವಿ ಮಾಡಿದ್ದಾರೆ.
ಮಾಲತಿಯವರ ಮೇಲೆ ಪಂಚಾಯತ್ ನಲ್ಲಿ ಅನೇಕ ಆರೋಪಗಳಿದ್ದು, ಸರಕಾರವು ಅವರನ್ನು ಅಮಾಸೆಬೈಲಿಗೆ ವರ್ಗಾವಣೆ ಮಾಡಿರುತ್ತದೆ ಅದೇ ಸಮಯದಲ್ಲಿ ಬಡಾನಿಡಿಯೂರು ಪಂಚಾಯತ್‌ಗೆ ನಿವೃತ್ತ ಸೈನಿಕ ರಾಜೇಶ್ ಶೆಣೈ ಅವರನ್ನು ವರ್ಗಾವಣೆ ಮಾಡಿರುತ್ತಾರೆ. ಆದರೆ ಮಾಲತಿಯವರು ಈ ವರ್ಗಾವಣೆಯನ್ನು ನ್ಯಾಯಾಲಯದಲ್ಲಿ ಪಶ್ನಿಸಿ ತಡೆಯಾಜ್ಞೆಯನ್ನು ತಂದಿರುತ್ತಾರೆ. ಇದರಿಂದ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಮತ್ತು ಗ್ರಾಮಸ್ಥರ ಕೆಲಸ ಕಾರ್ಯಗಳು ನಡೆಯದೇ ಆಡಳಿತ ಸ್ಥಗಿತಗೊಂಡಿರುತ್ತದೆ. ಈ ಮಧ್ಯೆ ಮಾಲತಿಯವರು ನ್ಯಾಯಾಲಯದಿಂದ ವಿಚಾರಣೆ ಬಾಕಿ ಇರುವಂತೆಯೇ ತನ್ನ ಪ್ರಭಾವ ಬಳಸಿ ವರ್ಗಾವಣೆಯನ್ನು ರದ್ದುಗೊಳಿಸಿರುತ್ತಾರೆ.
ಇದರ ವಿರುದ್ಧ ಗ್ರಾಮಸ್ಥರು ಪಂಚಾಯತ್ ನ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿ ನಮ್ಮ ಗ್ರಾಮಕ್ಕೆ ಬೇಡವಾದ ಮಾಲತಿಯವರನ್ನು ಬೇರೆ ಕಡೆಗೆ ವರ್ಗಾಯಿಸಿ ಕಳೆದ 3 ತಿಂಗಳಿಂದ ಉತ್ತಮ ಆಡಳಿತ ನಡೆಸಿದ ಜನರಿಗೆ ಅತ್ಯುತ್ತಮವಾಗಿ ಸ್ಪಂದಿಸಿದ ರಾಜೇಶ್ ಶೆಣೈರವರನ್ನು ಬಡನಿಡಿಯೂರಿನಲ್ಲಿಯೇ ಉಳಿಸಿಕೊಡುವಂತೆ ಗ್ರಾಮಸ್ಥರು ತಮ್ಮ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ ಹಾಗೂ ಇದಕ್ಕೆ ಪರಿಹಾರ ಸಿಗದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಜಿಲ್ಲಾ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.