ಅಲ್ಪಸಂಖ್ಯಾತರನ್ನು ಪಾಕಿಸ್ತಾನಿ ಎಂದು ಕರೆಯುವುದು ನಿಜವಾದ ಪ್ರಚೋದನೆ: ಮಂಗಳೂರು ಪೊಲೀಸ್ ಆಯುಕ್ತ

Oplus_131072

ಮಂಗಳೂರು: ಪ್ರಧಾನಿ ಮೋದಿಯವರ ಪ್ರಮಾಣ ವಚನ ಸ್ವೀಕಾರದ ಸಂಭ್ರಮಾಚರಣೆಯಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ ಮೆರವಣಿಗೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರನ್ನು ಪಾಕಿಸ್ತಾನಿಗಳೆಂದು ಬಣ್ಣಿಸಿ ನಿಂದಿಸಿರುವುದು ಬೋಳಿಯಾರ್‌ನಲ್ಲಿ ನಡೆದ ಚೂರಿ ಇರಿತ ಘಟನೆಗೆ ಕಾರಣವಾಗಿದೆ ಎಂದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ಬುಧವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿರುವ ಅವರು, ಮೋದಿ ಅವರು ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವ ಮೆರವಣಿಗೆಯಲ್ಲಿ 30-40 ಮಂದಿ ಇದ್ದರು. ಮಾರ್ಗಮಧ್ಯೆ ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆ. ಬಳಿಕ ಒಂದು ಬೈಕ್‌ನಲ್ಲಿ ಮೂವರು ಯುವಕರು ವಾಪಸ್ ತೆರಳಿ ಘೋಷಣೆ ಕೂಗಿದ್ದಾರೆ. ಆಗ ಅಲ್ಲಿದ್ದ 20 ಮಂದಿ ಸೇರಿ, ಕೆಲವರು ಹಲ್ಲೆ ನಡೆಸಿದ್ದಾರೆ. ಅವರಲ್ಲಿ ಒಬ್ಬಿಬ್ಬರು ಬಾರ್ ಬಳಿ ಚೂರಿಯಿಂದ ಇರಿದಿದ್ದು, ಘಟನೆಯಲ್ಲಿ ಓರ್ವನ ಹೊಟ್ಟೆಗೆ, ಇನ್ನೊರ್ವನ ಬೆನ್ನಿಗೆ ಗಾಯವಾಗಿದೆ. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಭಾರತ್ ಮಾತಾ ಕಿ ಜೈ ಘೋಷಣೆ ಹಾಕಿರುವುದಕ್ಕೆ ಚೂರಿ ಇರಿತ ನಡೆದಿಲ್ಲ. ಬದಲಾಗಿ ಮೆರವಣಿಗೆಯಲ್ಲಿ ಆಟೋರಿಕ್ಷಾ ನಿಲ್ದಾಣದ ಬಳಿ ಪಾಕಿಸ್ತಾನದೊಂದಿಗೆ ಸಂಬಂಧ ಕಲ್ಪಿಸಿ ಘೋಷಣೆಗಳನ್ನು ಕೂಗಿದ್ದಾರೆ. ನೀವು ಪಾಕಿಸ್ತಾನದ ಪರ ಇದ್ದೀರಿ, ಮೋದಿ ವಿರೋಧಿಗಳು. ಎಂಬ ಅರ್ಥದ ಆಕ್ಷೇಪಾರ್ಹ ಘೋಷಣೆ ಕೂಗಿದ್ದರು. ಇದು ಸಾಮಾಜಿಕ ಜಾಲತಾಣದ ಮೂಲಕ ಮುಸ್ಲಿಂ ಸಮುದಾಯದವರ ನ್ನು ತಲುಪಿ ಇದರಿಂದ ಪ್ರಚೋದನೆಗೊಂಡ ಕೆಲವರು ಚೂರಿಯಿಂದ ಇರಿದಿದ್ದಾರೆ ಎಂಬುದು ಗೊತ್ತಾಗಿದೆ ಎಂದು ತಿಳಿಸಿದರು.

ಏತನ್ಮಧ್ಯೆ, ಪೊಲೀಸರು ಅಬೂಬಕರ್ ಎಂಬಾತನನ್ನು ಬಂಧಿಸಿದ್ದು, ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ ಆರಕ್ಕೇರಿದೆ. ಉಳಿದ 14 ಮಂದಿಯನ್ನು ಬಂಧಿಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಪ್ರಕರಣದ ಆರೋಪಿಗಳಲ್ಲಿ ಒಬ್ಬ ರೌಡಿಶೀಟರ್ ಆಗಿದ್ದು, ಪಾಕೆಟ್ ಚಾಕುವಿನಿಂದ ಇರಿದಿರುವುದು ತಿಳಿದುಬದಿದೆ ಎಂದರು.

ಕಳೆದ 12 ತಿಂಗಳುಗಳಿಂದ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ನಡೆದಿಲ್ಲ. ಆದರೆ, ಚುನಾವಣೆಯ ಫಲಿತಾಂಶದ ಅನಂತರ ಏಕಾಏಕಿ ಮೂರು ಘಟನೆಗಳು ನಡೆದಿವೆ. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳ ಲಾಗುತ್ತಿದೆ. ಶಾಂತಿ ಕಾಪಾಡುವುದಕ್ಕಾಗಿ ಈಗಾಗಲೇ ಕೊಣಾಜೆಯಲ್ಲಿ ಎಲ್ಲ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ. ಬುಧವಾರದಿಂದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆ ನಡೆಸಲಾಗುವುದು. ರಾತ್ರಿ ವೇಳೆ ವಾಹನ ತಪಾಸಣೆಯನ್ನು ಕೂಡ ಬಿಗಿಗೊಳಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಆಯುಕ್ತರು ಹೇಳಿದರು

Leave a Reply

Your email address will not be published. Required fields are marked *

error: Content is protected !!