ಪಾಕ್ ಸಂಸತ್ ನಲ್ಲಿ ಮೋದಿ ಮೋದಿ… ಘೋಷಣೆ, ಸಚಿವ ಖುರೇಷಿ ಸಭಾತ್ಯಾಗ!
ಇಸ್ಲಾಮಾಬಾದ್: ಪಾಕಿಸ್ತಾನ ಸಂಸತ್ತಿನಲ್ಲಿ ಬಲೂಚಿಸ್ತಾನ್ ಸಂಸದರು ಜೋರು ಧ್ವನಿಯಲ್ಲಿ “ಮೋದಿ … ಮೋದಿ … ಮೋದಿ …” ಎಂದು ಘೋಷಣೆ ಕೂಗಿದ್ದಾರೆ ಎಂಬ ಸುದ್ದಿ ವಿಡಿಯೋ ಸಹಿತ ಭಾರಿ ಸುದ್ದಿಗೆ ಗ್ರಾಸವಾಗಿದೆ. ನಿಜಕ್ಕೂ ಪಾಕಿಸ್ತಾನ ಸಂಸತ್ ನಲ್ಲಿ ಮೋದಿ ಮೋದಿ ಘೋಷಣೆ ಕೂಗಲಾಗಿತ್ತೇ.. ಇಲ್ಲಿದೆ ಸತ್ಯಾಂಶ..
ಈಗಾಗಲೇ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ವಿಷಯದಲ್ಲಿ, ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಅವರ ಕಾಲುಗಳು ನಡುಗಿದ್ದವು ಎಂಬ ಸುದ್ದಿ ಪಾಕಿಸ್ತಾನಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ಇದರ ನಡುವೆಯೇ ಪಾಕಿಸ್ತಾನ ಸಂಸತ್ ನಲ್ಲಿ ಕೆಲ ಸಂಸದರು ಮೋದಿ ಮೋದಿ ಘೋಷಣೆ ಕೂಗಿದ್ದಾರೆ ಎಂಬ ಸುದ್ದಿ ವ್ಯಾಪಕ ವೈರಲ್ ಆಗುತ್ತಿದೆ.
ಇಷ್ಚಕ್ಕೂ ಪಾಕ್ ಸಂಸತ್ ನಲ್ಲಿ ಆಗಿದ್ದೇನು?
ಚಾರ್ಲಿ ಹೆಬ್ಡೋ ಕಾರ್ಟೂನ್ ಮತ್ತು ಇಸ್ಲಾಮೋಫೋಬಿಯಾ ವಿಚಾರವಾಗಿ ಪಾಕ್ ಸಂಸತ್ ನಲ್ಲಿ ಚರ್ಚೆ ನಡೆಯುತ್ತಿತ್ತು. ಈ ವೇಳೆ ಬಲೂಚಿಸ್ತಾನ್ ಸಂಸದರು ಜೋರು ಧ್ವನಿಯಲ್ಲಿ “ವೋಟಿಂಗ್ ವೋಟಿಂಗ್.. ವೋಟಿಂಗ್ …” ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಮೊಹಮ್ಮದ್ ಖುರೇಷಿ ವ್ಯಂಗ್ಯಗೊಂಡು ತಮ್ಮ ಭಾಷಣವನ್ನು ಮಧ್ಯದಲ್ಲಿಯೇ ಮೊಟುಗೊಳಿಸಿ ಸಂಸತ್ತಿನಿಂದ ಹೊರ ನಡೆದಿದ್ದಾರೆ. ಬಲೂಚಿಸ್ತಾನ್ ವಿಷಯ ಕುರಿತು ಖುರೇಷಿ ಮಾತನಾಡುತ್ತಿದ್ದಾಗ ಬಲೂಚಿಸ್ತಾನ್ ಸಂಸದರು ಮೋದಿಯನ್ನು ಕೊಂಡಾಡಿದ್ದಾರೆ. ಪದೇ ಪದೇ ವೋಟಿಂಗ್ … ವೋಟಿಂಗ್ … ವೋಟಿಂಗ್ .. ವೋಟಿಂಗ್ .. ಘೋಷಣೆ ಕೂಗಿ ಸಚಿವರ ಭಾಷಣವನ್ನು ಪದೇ ಪದೇ ಅಡ್ಡಿಪಡಿಸಿದರು.
ಇದರಿಂದ ಸಿಟ್ಟಿಗೆದ್ದ ಸಚಿವ ಖುರೇಷಿ …. ಆ ಸಂಸದರ ಹೃದಯಗಳಲ್ಲಿ ಮೋದಿಯವರ ಆಶಯಗಳು ನುಸುಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ಪಕ್ಷದ ಸದಸ್ಯರು ಪಾಕಿಸ್ತಾನದಲ್ಲಿ ಭಾರತದ ದೃಷ್ಟಿಕೋನವನ್ನು ಮಾರಾಟ ಮಾಡುತ್ತಿದ್ದಾರೆ. ರಾಷ್ಟ್ರೀಯ ಸಂಸ್ಥೆಗಳನ್ನು ಲಘುವಾಗಿ ಪರಿಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಪ್ರತಿಪಕ್ಷಗಳ ಸದಸ್ಯರ ಬಲೂಚಿಸ್ತಾನ್ ಸ್ವಾತಂತ್ರ್ಯದ ಘೋಷಣೆಗಳು ನಾಚಿಕೇಗೇಡು ಎಂದು ಹೇಳಿ ಸಂಸದರ ವರ್ತನೆಯನ್ನು ಖಂಡಿಸಿದರು.
ಇದೇ ವೇಳೆ ಆಡಳಿತ ಪಕ್ಷದ ಸಂಸದರು ಮೋದಿ ಪರ ಘೋಷಣೆ ಕೂಗುವ ನಾಯಕರು ದೇಶದ್ರೋಹಿಗಳು ಎಂದು ಮರುಘೋಷಣೆ ಕೂಗಿದ್ದಾರೆ.