ಜೂನ್ 12: ಇನ್ನ ವಿದ್ಯುತ್‌ಲೈನ್ ವಿರೋಧಿ ಹೋರಾಟ ಸಮಿತಿ ಪ್ರತಿಭಟನೆ
ಉಡುಪಿ, ಜೂ.10: ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡದೇ, ಯೋಜನೆ ಕುರಿತಂತೆ ಯಾವುದೇ ಸಮಾಲೋಚನೆ ನಡೆಸದೇ ಪಡುಬಿದ್ರಿಯ ಎಲ್ಲೂರಿನಿಂದ ಕೇರಳದ ಕಾಸರಗೋಡಿಗೆ 400 ಕೆ.ವಿ. ವಿದ್ಯುತ್ ಲೈನ್‌ನ್ನು ಕಾರ್ಕಳ ತಾಲೂಕು ಇನ್ನಾ ಗ್ರಾಮದ ಮೂಲಕ ಕೊಂಡೊಯ್ಯುವ ಪ್ರಯತ್ನವನ್ನು ಖಂಡಿಸಿ ಜೂ.12ರ ಬೆಳಗ್ಗೆ 10 ರಿಂದ ಇನ್ನಾ ಗ್ರಾಮ ಪಂಚಾಯತ್ ಬಳಿ ವಿವಿಧ ಸಂಘಟನೆಗಳ ನೆರವಿನಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ-ಕಾಸರಗೋಡು 400 ಕೆ.ವಿ. ವಿದ್ಯುತ್‌ಲೈನ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಅಮರನಾಥ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ತಿಳಿಸಿದ್ದಾರೆ.
ಸಮಿತಿಯು ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ ಎರಡು ವರ್ಷಗಳಿಂದ ಈ ಯೋಜನೆ ವಿರುದ್ಧ ಹೋರಾಟ ನಡೆಸುತ್ತಿರುವ ಸಮಿತಿಯ ಜೊತೆಗೆ ಈ ಹೋರಾಟದಲ್ಲಿ ಸುತ್ತಮುತ್ತಲಿನ ಯೋಜನಾ ಸಂತ್ರಸ್ಥ ಗ್ರಾಮಸ್ಥರು ಹಾಗೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ರೈತ ಪರ ಸಂಘಟನೆಗಳು ಕೈಜೋಡಿಸಲಿವೆ ಎಂದರು.
ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಉತ್ಪಾದನೆಯಾದ ವಿದ್ಯುತ್‌ನ್ನು 400ಕೆ.ವಿ. ವಿದ್ಯುತ್ ಲೈನ್ ಮೂಲಕ ಕೇರಳಕ್ಕೆ ಕೊಂಡೊಯ್ಯುವ ಯೋಜನೆ ಇದಾಗಿದೆ. ಈ ಅಪಾಯಕಾರಿ ವಿದ್ಯುತ್ ಲೈನ್ ಹಾದುಹೋಗುವ ಎಲ್ಲೂರು, ಪಲಿಮಾರು, ಮುಂಡ್ಕೂರು, ಬಳ್ಕುಂಜೆ ಗ್ರಾಮಗಳ ನಾಗರಿಕರು ಈ ಹೋರಾಟದಲ್ಲಿ ನಮ್ಮ ಜೊತೆಗಿರಲಿದ್ದಾರೆ. ಇದನ್ನು ಯೋಜನೆಯ ಗುತ್ತಿಗೆ ಪಡೆದುಕೊಂಡಿರುವುದಾಗಿ ಹೇಳುತ್ತಿರುವ ಉಡುಪಿ-ಕಾಸರಗೋಡು ಪವರ್ ಟ್ರಾನ್ಸ್‌ಮಿಷನ್ ಲಿ. (ಯುಕೆಟಿಎಲ್) ಸ್ಟರ್‌ಲೈಟ್ ಕಂಪೆನಿ ಅನುಷ್ಠಾನ ಗೊಳಿಸುತ್ತಿದೆ ಎಂದು ಚಂದ್ರಹಾಸ ಶೆಟ್ಟಿ ತಿಳಿಸಿದರು.
ಕಾರ್ಕಳ ತಾಲೂಕಿನ ಎರಡನೇ ಅತಿದೊಡ್ಡ ಗ್ರಾಮವೆನಿಸಿದ ಇನ್ನಾ ಗ್ರಾಮದ ಮೂಲಕ ಈಗಾಗಲೇ ಉಡುಪಿ (ಯುಪಿಸಿಎಲ್)-ಹಾಸನ ವಿದ್ಯುತ್ ಮಾರ್ಗ ಹಾಗೂ ಪಾದೂರು ತೈಲ ಸಂಗ್ರಹಾಗಾರದ ಪೈಪ್ ಲೈನ್ ಹಾದು ಹೋಗಿವೆ. ಇವುಗಳಿಂದ ಇನ್ನಾ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು, ಕೃಷಿ ಕೂಲಿ ಕಾರ್ಮಿಕರು ನಿತ್ಯ ಅನುಭವಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರವೇ ಇಲ್ಲವಾಗಿದೆ ಎಂದವರು ವಿವರಿಸಿದರು.
ಈ ಯೋಜನೆಗಳಿಗೆ ಕೃಷಿ ಅವಲಂಬಿತ ಭೂಮಾಲಕರಿಂದ ಬಲಾತ್ಕಾರವಾಗಿ ಕಸಿದುಕೊಂಡ ಫಲವತ್ತಾದ ಭೂಮಿಯ ಉಳಿಕೆ ಭಾಗದಲ್ಲಿ ಕೃಷಿ ಮಾಡುವುದು ಬಿಡಿ, ಮಳೆಗಾಲದಲ್ಲಿ ಈ ಲೈನ್ ಹಾದುಹೋದ ಮಾರ್ಗದ ಪಕ್ಕ ನಡೆದಾಡುವುದು ಜನ, ಪಶುಪಕ್ಷಿ, ಜಾನುವಾರುಗಳಿಗೆ ಅಪಾಯಕಾರಿ ಎನಿಸಿದೆ ಎಂದು ಚಂದ್ರಹಾಸ ಶೆಟ್ಟಿ ತಿಳಿಸಿದರು.
ಇದೀಗ ಉಡುಪಿ-ಕಾಸರಗೋಡು 400ಕೆ.ವಿ. ವಿದ್ಯುತ್ ಲೈನ್ ಅಳವಡಿಕೆಗಾಗಿ ನಮ್ಮೆಲ್ಲರ ತೀವ್ರ ವಿರೋಧವಿದ್ದು, ಇದನ್ನು ಜಿಲ್ಲಾಧಿಕಾರಿ, ಶಾಸಕರು, ಸಂಸದರು, ಉಸ್ತವಾರಿ ಸಚಿವರು ಹಾಗೂ ಸರಕಾರಗಳಿಗೆ ಸತತವಾಗಿ ಮಾಡಿಕೊಂಡ ಮನವಿ, ಹಕ್ಕೊತ್ತಾಯ, ಪ್ರತಿಭಟನೆಗಳೆಲ್ಲವನ್ನೂ ಮೀರಿ ಕಂಪೆನಿ ಕಾಮಗಾರಿಯನ್ನು ಬಲಾತ್ಕಾರವಾಗಿ ನಡೆಸಲು ಮುಂದಾಗುತ್ತಿದೆ ಎಂದವರು ಆರೋಪಿಸಿದರು.
ಸ್ಟರ್‌ಲೈಟ್ ಕಂಪೆನಿ ಯೋಜನೆಯಿಂದ ಬಾಧಿತರಾಗುವ ಜಮೀನು ಮಾಲಕರಿಗೆ ಯಾವುದೇ ಪೂರ್ವ ಮಾಹಿತಿ, ನೋಟೀಸು ನೀಡದೇ, ಜಿಲ್ಲಾಧಿಕಾರಿಯವರ ಆದೇಶವಿದೆಯೆಂದು ಬಾಯ್ಮಾತಿನಲ್ಲಿ ಹೇಳಿಕೊಂಡು ಕಾರ್ಕಳ ತಹಶೀಲ್ದಾರರ ಉಪಸ್ಥಿತಿಯಲ್ಲಿ ಪೊಲೀಸರ ನೆರವು ಪಡೆದು ಏಕಾಏಕಿ ಜೆಸಿಬಿ ತಂದು ನಮ್ಮ ಗದ್ದೆ-ಜಾಗದಲ್ಲಿ ಅಕ್ರಮ ಕಾಮಗಾರಿ ನಡೆ ಸಲು ಪ್ರಯತ್ನಿಸುತ್ತಿದೆ ಎಂದು ಅಮರನಾಥ್ ಶೆಟ್ಟಿ ತಿಳಿಸಿದರು.
ಈ ವೇಳೆ ತಮ್ಮ ಜಾಗದಲ್ಲಿ ಅಡ್ಡನಿಂತ ಮಹಿಳೆಯರು, ವೃದ್ಧರ ವಿರುದ್ಧ ಕಂಪೆನಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದುವರ್ತನೆ ತೋರಿದ್ದಾರೆ. ಅದರನ್ನೆಲ್ಲಾ ದೂಡಿ ಕೃಷಿಗೆ ಸಿದ್ಧಪಡಿಸಿದ ಗದ್ದೆಯಲ್ಲಿ ಗುಂಡಿಗಳನ್ನು ತೋಡಲು ಮುಂದಾಗಿ ದ್ದಾರೆ. ಕಾಮಗಾರಿಗೆ ಜಿಲ್ಲಾಧಿಕಾರಿಗಳ ಲಿಖಿತ ಆದೇಶ ಪ್ರತಿ ನೀಡುವಂತೆ ಕೇಳಿದಾಗ ಏನನ್ನೂ ನೀಡಿಲ್ಲ. ಹೀಗಾಗಿ ಈ ಯೋಜನೆ ಸಂಪೂರ್ಣ ಕಾನೂನು ಬಾಹಿರ ಎಂಬುದು ನಮಗೆ ಮನದಟ್ಟಾಗಿದೆ ಎಂದು ಶೆಟ್ಟಿ ತಿಳಿಸಿದರು.
ಈ ವಿಷಯದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗಳು ಕಂಪೆನಿ ಪರ ವಕಾಲತ್ತು ವಹಿಸುತ್ತಿರುವುದು ಖಂಡನೀಯ ಎಂದರು. ಕೃಷಿಯನ್ನೇ ನಂಬಿ ಬದುಕುತ್ತಿರುವ, ನಮ್ಮ ನೆಲ-ಜಲ- ಪರಿಸರದ ಉಳಿವಿಗಾಗಿ ಉಗ್ರ ಹೋರಾಟಕ್ಕೆ ನಾವೀಗ ಸಿದ್ಧರಾಗಿದ್ದೇವೆ. ಒಂದು ವೇಳೆ ಯೋಜನೆ ಅನಿವಾರ್ಯವಾದರೆ, ಅದನ್ನು ಜನವಸತಿ ಪ್ರದೇಶದಿಂದ ದೂರ ನಿರ್ಜನ ಪ್ರದೇಶದಲ್ಲಿ ಕೊಂಡೊಯ್ಯಬೇಕು ಹಾಗೂ ನಮ್ಮ ಜಾಗಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದರು.
ಆದುದರಿಂದ ನಮ್ಮೆಲ್ಲಾ ಬೇಡಿಕೆಗಳನ್ನು ಕೂಡಲೇ ಈಡೆರಿಸುವಂತೆ ಒತ್ತಾಯಿಸಿ ಜೂ.12ರಂದು ಇನ್ನಾ ಗ್ರಾಪಂ ಎದುರು ಬೃಹತ್ ಹೋರಾಟ ನಡೆಯಲಿದ್ದು, ಇಲ್ಲಿಗೆ ಸ್ವತಹ ಜಿಲ್ಲಾಧಿಕಾರಿಗಳೇ ಆಗಮಿಸಿ ನಮ್ಮ ಮನವಿಯನ್ನು ಆಲಿಸಿ, ಸಂಶಯಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಂನ ಮಾಜಿ ಸದಸ್ಯೆ ರೇಶ್ಮಾ ಉದಯ ಶೆಟ್ಟಿ, ಇನ್ನಾ ಗ್ರಾಪಂ ಸದಸ್ಯ ದೀಪಕ್ ಕೋಟ್ಯಾನ್, ದಿನೇಶ್ ಕೋಟ್ಯಾನ್, ಪ್ರವೀಣ್ ಶೆಟ್ಟಿ, ಪ್ರವೀಣ್ ಕೋಟ್ಯಾನ್ ಹಾಗೂ ಅರುಣ್ ಶೆಟ್ಟಿ ಉಪಸ್ಥಿತರಿದ್ದರು.