ಬಾಲಕಿಯ ದೂರು ಸ್ವೀಕರಿಸುವಲ್ಲಿ ನಿರ್ಲಕ್ಷ್ಯ: ಇನ್ ಸ್ಪೆಕ್ಟರ್, ಎಎಸ್ಸೈ ಸಹಿತ ಮೂವರ ಅಮಾನತು
ಮೈಸೂರು, ಜು.10: ಕಿರುಕುಳಕ್ಕೆ ಸಂಬಂಧಿಸಿ ಕೆ.ಆರ್.ನಗರ ತಾಲೂಕಿನ ಗ್ರಾಮವೊಂದರ ಅಪ್ರಾಪ್ತ ವಯಸ್ಸಿನ ಬಾಲಕಿಯ ಪೋಷಕರು ನೀಡಿದ ದೂರನ್ನು ದಾಖಲಿಸಿಕೊಳ್ಳದೆ ಒಂದೇ ಕುಟುಂದ ನಾಲ್ವರು ವಿಷ ಸೇವಿಸಿ, ಒಬ್ಬರು ಸಾವಿಗೀಡಾದ ಘಟನೆಗೆ ಸಂಬಂಧಿಸಿ ಕೆ.ಆರ್.ನಗರ ಠಾಣೆಯ ಇನ್ ಸ್ಪೆಕ್ಟರ್ ಪಿ.ಪಿ.ಸಂತೋಷ್, ಎಎಸ್ಸೈ ಗಿರೀಶ್, ಮುಖ್ಯ ಪೇದೆ ರಾಘವೇಂದ್ರ ಎಂಬವರನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡಿ ಆದೇಶಿಸಿದ್ದಾರೆ.
ಆಪ್ರಾಪ್ತ ವಯಸ್ಸಿನ ಸಂತ್ರಸ್ತೆ ನೀಡಿದ ದೂರನ್ನು ಎಸ್.ಸಿ., ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ, ಪೊಕೋ ಕಾಯ್ದೆ ಹಾಗೂ ಐಪಿಸಿ 370 ಸೆಕ್ಷನ್ನಡಿ ದಾಖಲು ಮಾಡಿಕೊಳ್ಳದೇ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದ ವರದಿ ಪಡೆದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಈ ಅಮಾನತು ಆದೇಶ ಹೊರಡಿಸಿದ್ದಾರೆ.
ಕೆ.ಆರ್.ನಗರ ತಾಲೂಕಿನ ಗ್ರಾಮವೊಂದರ ಲೋಕೇಶ್ ಎಂಬಾತ ಪಕ್ಕದ ಗ್ರಾಮದ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ಆಕೆಯ ಖಾಸಗಿ ಫೋಟೋ ಹಾಗೂ ವೀಡಿಯೊ ಮಾಡಿ ವೈರಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದನೆನ್ನಲಾಗಿದೆ. ಈ ವಿಚಾರವಾಗಿ ಸಂತ್ರಸ್ತೆಯ ಪೋಷಕರು ಕೆ.ಆರ್. ನಗರ ಠಾಣೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ನೊಂದ ಬಾಲಕಿಯ ಕುಟುಂಬದ ನಾಲ್ವರು ಜೂ.7ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಾಲ್ವರ ಪೈಕಿ ಬಾಲಕಿಯ ತಾತ ಮೃತಪಟ್ಟಿದ್ದರೆ, ಉಳಿದ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಗೆ ಕೆ.ಆರ್.ನಗರ ಠಾಣೆ ಪೊಲೀಸರೇ ಕಾರಣ ಎಂದು ವಾಲ್ಮೀಕಿ ಸಮುದಾಯದ ಹಲವಾರು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು.