ಮೋದಿ 3.0: ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸಿಎಂ ಕುಮಾರಸ್ವಾಮಿ

ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜನತಾ ದಳ(ಜಾತ್ಯತೀತ) ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಭಾನುವಾರ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇಂದು ರಾತ್ರಿ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಚ್ ಡಿ ಕುಮಾರಸ್ವಾಮಿ ಅವರಿಗೆ ಪತಿಜ್ಞಾವಿಧಿ ಬೋಧಿಸಿದರು. ಸರತಿಯಲ್ಲಿ 9ನೇ ಯವರಾಗಿ ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಎಂಟು ಜನ ಬಿಜೆಪಿ ನಾಯಕರು ಪ್ರಮಾಣ ಸ್ವೀಕರಿಸಿದ ನಂತರ ಎನ್​​ಡಿಎ ಒಕ್ಕೂಟದ ಮಿತ್ರಪಕ್ಷಗಳಲ್ಲಿ ಮೊದಲಿಗರಾಗಿ ಕುಮಾರಸ್ವಾಮಿ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಲೋಕಸಭೆ ಚುನಾವಣೆಯಲ್ಲಿ ಗೆದ್ದ ಇಬ್ಬರು ಜೆಡಿಎಸ್ ಅಭ್ಯರ್ಥಿಗಳಲ್ಲಿ ಒಬ್ಬರಿಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ಅವರು 2006-7 ಮತ್ತು ನಂತರ 2018-19 ರವರೆಗೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಬಾರಿ, ಬಿಜೆಪಿ ಮತ್ತು ಜೆಡಿಎಸ್(ಎಸ್) ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸಿದ್ದು, ರಾಜ್ಯದ 28 ಕ್ಷೇತ್ರಗಳ ಪೈಕಿ 19 ರಲ್ಲಿ ಗೆಲುವು ಸಾಧಿಸಿವೆ.

Leave a Reply

Your email address will not be published. Required fields are marked *

error: Content is protected !!