ಕೋವಿಡ್ ಲಸಿಕೆ ನೀಡಲು ಡೇಟಾ ಬೇಸ್ ಸಿದ್ದಪಡಿಸಿ: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಅ. 29 : ಕೋವಿಡ್19 ಗೆ ಲಸಿಕೆ ತಯಾರಿಕೆಯು ಅಂತಿಮ ಹಂತದಲ್ಲಿದ್ದು, ಕೇಂದ್ರ ಸರ್ಕಾರದ ನಿರ್ದೇಶನದಂತೆ, ಲಸಿಕೆಯನ್ನು ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು, ಮತ್ತು ಸಹಾಯಕ ಸಿಬ್ಬಂದಿಗಳಿಗೆ ನೀಡಬೇಕಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿರುವ
ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳ ಮಾಹಿತಿಯ ಡೇಟಾಬೇಸ್ ನ್ನು ಶೀಘ್ರದಲ್ಲಿ ಸಿದ್ದಪಡಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು.
ಅವರು ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ , ಕೋವಿಡ್ ಲಸಿಕಾ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್19 ಲಸಿಕೆ ನೀಡಲು ಜಿಲ್ಲೆಯಲ್ಲಿ ಕೆಪಿಎಂಇ ಕಾಯ್ದೆಯಡಿ ನೊಂದಣಿಯಾಗಿ ವೈದ್ಯಕೀಯ ಸೇವೆ ಒದಗಿಸುತ್ತಿರುವ 982 ಖಾಸಗಿ ಸಂಸ್ಥೆಗಳು ಹಾಗೂ 92 ಸರಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ, ವೈದ್ಯರು, ಶುಶ್ರೂಶಕರು, ಲ್ಯಾಬ್
ಟೆಕ್ನೀಷಿಯನ್ ಗಳು, ಸಹಾಯಕ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರ ವಿವರಗಳನ್ನು ಸಮಗ್ರವಾಗಿ ದಾಖಲಿಸಿಕೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ನಂತರದ ಹಂತದಲ್ಲಿ ವೃದ್ದರು ಮತ್ತು ದುರ್ಬಲ ವ್ಯಕ್ತಿಗಳಿಗೆ ಲಸಿಕೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಮಕ್ಕಳಿಗೆ ನೀಡುವ ನಿಗಧಿತ ಲಸಿಕೆಗಳನ್ನು ಯಾವುದೇ ಕಾರಣಕ್ಕೂ ತಪ್ಪಿಸದಂತೆ ಸೂಚಿಸಿದ ಜಿಲ್ಲಾಧಿಕಾರಿ ನಿರಂತರವಾಗಿ ಕಾಯಕ್ರಮಗಳನ್ನು ಆಯೋಜಿಸಿ ಲಸಿಕೆ ನೀಡಿ, ಲಾಕ್‌ಡೌನ್ ಸಮಯದಲ್ಲಿ ಕುಂಠಿತಗೊAಡಿರುವ ಗುರಿಯನ್ನು
ಪೂರ್ಣಗೊಳಿಸುವಂತೆ ಸೂಚಿಸಿದರು. ಹೆರಿಗೆ ವೇಳೆ ತಾಯಿ ಮರಣವನ್ನು ತಪ್ಪಿಸಲು ಎಲ್ಲಾ ರೀತಿಯ ಗರಿಷ್ಠ ಪ್ರಯತ್ನ ಮಾಡಿ, ಗರ್ಭಿಣಿಯರಿಗೆ ಹೆರಿಗೆ ವೇಳೆ ಸಮಸ್ಯೆ ಕಂಡು ಬರುವ ಸಾಧ್ಯತೆಯಿದ್ದಲ್ಲಿ ಅವರ ಚಿಕಿತ್ಸೆಗೆ ಮುಂಚಿತವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.
ಜಿಲ್ಲೆಯಲ್ಲಿ ಕೋವಿಡ್ -19 ಪ್ರಮಾಣ ಕಡಿಮೆಯಾಗುತ್ತಿದ್ದು, ಸಾವುಗಳು ಸಹ ಕಡಿಮೆಯಾಗಿವೆ, ಸಾರ್ವಜನಿಕರು , ಕೋವಿಡ್ ಸಂಪೂರ್ಣವಾಗಿ ನಾಶವಾಗುವವರೆಗೆ ಸಾಮಾಜಿಕ ಅಂತರ ಪಾಲನೆ ಮತ್ತು ಮಾಸ್ಕ್ ಧರಿಸುವುದನ್ನು ನಿತ್ಯದ
ರೂಡಿಯನ್ನಾಗಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಡಿಹೆಚ್‌ಓ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಆರೋಗ್ಯ ಇಲಾಖೆಯ ಅಧಿಕಾರಿಗಳು , ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಎಂ.ಜಿ.ರಾಮ ಸ್ವಾಗತಿಸಿ, ವಂದಿಸಿದರು.