ಉಡುಪಿ ನಗರಸಭೆಯಲ್ಲಿ ಮಹಿಳಾ ಮಣಿಯರ ದರ್ಬಾರ್!
ಉಡುಪಿ: ಉಡುಪಿ ನಗರಸಭೆ ಯ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗೆ ಆಯ್ಕೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಸುಮಿತ್ರಾ ನಾಯಕ್, ಉಪಾಧ್ಯಕ್ಷರಾಗಿ ಲಕ್ಷ್ಮೀ ಮೆಂಡನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಅವರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಯಾಗಿ ಭಾಗವಹಿಸಿ ಗುರುವಾರ ನಡೆಸಿಕೊಟ್ಟರು. ನಗರಸಭೆಯ 35 ವಾರ್ಡ್ ಗಳಲ್ಲಿ ಬಿಜೆಪಿ 31 ಮತ್ತು ಕಾಂಗ್ರೆಸ್ 4 ಸದಸ್ಯರಾಗಿ ಆಯ್ಕೆಯಾಗಿದ್ದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಉಡುಪಿ ಶಾಸಕ ರಘುಪತಿ ಭಟ್ ಅವರು ಉಡುಪಿ ನಗರಸಭೆಯನ್ನು ಹಲವಾರು ಗಣ್ಯರು ಆಡಳೀತ ನಡೆಸಿದ್ದು ಅವರ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನೂತನ ಅಧ್ಯಕ್ಷರಿಗಿದ್ದು, ಅವರಿಗೆ ಎಲ್ಲಾ ಸದಸ್ಯರೂ ನಗರದ ಅಭಿವೃದ್ಧಿ ಕಾರ್ಯಕ್ಕೆ ಬೆಂಬಲ ನೀಡಿ ಮಾದರಿ ನಗರಸಭೆಯಾಗಿ ಮಾಡುವಂತೆ ಮನವಿ ಮಾಡಿಕೊಂಡರು.
ವಿರೋಧ ಪಕ್ಷದ ಪರವಾಗಿ ರಮೇಶ್ ಕಾಂಚನ್ ಮಾತನಾಡಿ, ನೂತನ ಅಧ್ಯಕ್ಷರಿಗೆ ನಗರಸಭೆಯ ಬಗ್ಗೆ ಉತ್ತಮವಾದ ಅನುಭವವಿದ್ದು ಮೂರನೇ ಬಾರಿಗೆ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ನಗರಸಭೆಯಲ್ಲಿ ಮಾಡುವ ಉತ್ತಮ ಕೆಲಸಗಳಿಗೆ ವಿರೋಧ ಪಕ್ಷವಾಗಿ ಕಾಂಗ್ರೆಸ್ ಸದಾ ಬೆಂಬಲ ನೀಡಲಿದ್ದು ಸಂಖ್ಯೆಯ ಅನುಗುಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಕೇವಲ ನಾಲ್ಕು ಮಂದಿ ಇದ್ದರೂ ಕೂಡ ನಮ್ಮನ್ನು ಕಡೆಗಣಿಸುವ ಕೆಲಸ ನಡೆದರೆ ಸದನದ ಒಳಗೂ ಹೊರಗೂ ಪ್ರತಿಭಟಿಸಲಾಗುವುದು ಎಂದು ಹೇಳಿದರು.
ನೂತನ ಅಧ್ಯಕ್ಷೆ ಸುಮೀತ್ರಾ ನಾಯಕ್ ಮಾತನಾಡಿ, ತನ್ನನ್ನು ಪಕ್ಷ ಉನ್ನತ ಹುದ್ದೆಗೆ ಆಯ್ಕೆ ಮಾಡಿರುವುದಕ್ಕೆ ಧನ್ಯವಾದ ಸಲ್ಲಿಸಿ ಅಧ್ಯಕ್ಷ ಸ್ಥಾನ ಎನ್ನುವುದು ಒಂದು ಹುದ್ದೆ ಎನ್ನುವುದನ್ನು ಮರೆತು ಅದೊಂದು ಜವಾಬ್ದಾರಿ ಎಂದು ತಿಳಿದು ಕೆಲಸ ನಿರ್ವಹಿಸುತ್ತೇನೆ. ಎಲ್ಲರ ಸಹಕಾರ ಮಾರ್ಗದರ್ಶನದಿಂದ ನಗರಸಭೆಯಲ್ಲಿ ಸ್ವಚ್ಚ ಆಡಳಿತ ನೀಡುವುದರೊಂದಿಗೆ ಪ್ಲಾಸ್ಟಿಕ್ ಮುಕ್ತ ನಗರಸಭೆ ಮಾಡುವತ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.