ವಿಧಾನ ಪರಿಷತ್ ಚುನಾವಣೆ: 11 ಮಂದಿ ಅವಿರೋಧ ಆಯ್ಕೆ
ಬೆಂಗಳೂರು: ವಿಧಾನಪರಿಷತ್ತಿಗೆ ಕಾಂಗ್ರೆಸ್ ಪಕ್ಷದ 7, ಬಿಜೆಪಿಯ 3 ಹಾಗೂ ಜೆಡಿಎಸ್ ಪಕ್ಷದ ಓರ್ವ ಸದಸ್ಯ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿಯಾಗಿರುವ ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಐವಾನ್ ಡಿ’ಸೋಜ, ಕೆ. ಗೋವಿಂದರಾಜ್, ಜಗದೇವ್ ಗುತ್ತೇದಾರ್, ಬಲ್ಕೀಸ್ ಬಾನು, ಎನ್.ಎಸ್.ಭೋಸರಾಜು, ಡಾ.ಯತೀಂದ್ರ, ಎ.ವಸಂತಕುಮಾರ್, ಬಿಜೆಪಿ ಪಕ್ಷದಿಂದ ಸಿ.ಟಿ.ರವಿ, ಎನ್.ರವಿಕುಮಾರ್, ಮುಳೆ ಮಾರುತಿರಾವ್ ಹಾಗೂ ಜೆಡಿಎಸ್ ಪಕ್ಷದಿಂದ ಟಿ.ಎನ್.ಜವರಾಯಿ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ಜೂ.13ರಂದು ಚುನಾವಣೆ ನಡೆಯಬೇಕಿತ್ತು. 11 ಸ್ಥಾನಗಳಿಗೆ ಒಟ್ಟು 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ, ಆಸಿಫ್ ಪಾಷಾ ಎಂಬವರು ಸಲ್ಲಿಕೆ ಮಾಡಿದ್ದ ನಾಮಪತ್ರದಲ್ಲಿ ಸೂಚಕರಿಲ್ಲದ ಕಾರಣ ತಿರಸ್ಕೃತ ಗೊಳಿಸಲಾಗಿತ್ತು. ಗುರುವಾರ(ಜೂ.6) ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿತ್ತು. ಆದರೆ, ಯಾರೊಬ್ಬರೂ ನಾಮಪತ್ರ ಹಿಂಪಡೆಯದೆ ಇದ್ದುದ್ದರಿಂದ ಕಣದಲ್ಲಿದ್ದ ಎಲ್ಲ 11 ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ.