ಬಡ್ತಿ ಸಿಗದಿದ್ದಕ್ಕೆ ಅಸಮಾಧಾನ: ಐಪಿಎಸ್ ರವೀಂದ್ರನಾಥ್ ರಾಜೀನಾಮೆ

ಬೆಂಗಳೂರು: ಬಡ್ತಿ ನೀಡಲಿಲ್ಲವೆಂದು ಅಸಮಾಧಾನಗೊಂಡ ಹಿರಿಯ ಐಪಿಎಸ್ ಅಧಿಕಾರಿ ರವೀಂದ್ರನಾಥ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಅರಣ್ಯ ಇಲಾಖೆಯ ಎಡಿಜಿಪಿ ರವೀಂದ್ರನಾಥ್ ಅವರು, ತಮಗಿಂತ ಕಿರಿಯ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಬುಧವಾರ ಬಡ್ತಿ ನೀಡಿದ ಹಿನ್ನೆಲೆಯಲ್ಲಿ ತೀವ್ರ ನೊಂದ ಅವರು ತಡರಾತ್ರಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ರಾಜೀನಾಮೆ ನೀಡಲು ತೆರಳಿದ್ದರು. ಆದರೆ, ಡಿಜಿ ಅವರಿಗೆ  ಭೇಟಿಯಾಗಲು ಅವಕಾಶ ದೊರಕದೇ ಇರುವುದರಿಂದ ಕಂಟ್ರೋಲ್ ರೂಂಗೆ ತೆರಳಿ ಅವರು ತ್ಯಾಗ ಪತ್ರ ಸಲ್ಲಿಸಿದ್ದಾರೆ.

ಅಮರ್ ಕುಮಾರ್ ಪಾಂಡೆ ಅವರನ್ನು ಕಾನೂನು ಸುವ್ಯವಸ್ಥೆ ಎಡಿಜಿಪಿ ಹುದ್ದೆಯಿಂದ ಡಿಜಿಪಿ ಪೊಲೀಸ್ ತರಬೇತಿ ವಿಭಾಗಕ್ಕೂ, ಟಿ.ಸುನೀಲ್ ಕುಮಾರ್ ಅವರನ್ನು ಎಸಿಬಿ ಎಡಿಜಿಪಿಯಿಂದ ಸಿಐಡಿ ವಿಶೇಷ ಹಾಗೂ ಆರ್ಥಿಕ ಅಪರಾಧ ವಿಭಾಗದ ಡಿಜಿಪಿಯಾಗಿಯೂ, ಸಿ.ಎಚ್.ಪ್ರತಾಪ್ ರೆಡ್ಡಿ ಅವರನ್ನು ಎಡಿಜಿಪಿ ಪೊಲೀಸ್  ಸಂಪರ್ಕ ಸಂವಹನ ಹಾಗೂ ಅಧುನೀಕರಣ ಜೊತೆಗೆ ಕಾನೂನು ಸುವ್ಯವಸ್ಥೆಗೆ ವರ್ಗಾಯಿಸಿ ಸರ್ಕಾರ ಬುಧವಾರ ರಾಜ್ಯ ಸರ್ಕಾರ ಆದೇಶಿಸಿ ಜೊತೆಗೆ ಈ ಮೂವರಿಗೂ ಡಿಜಿಪಿ ರ್ಯಾಂಕ್​ಗೆ ಬಡ್ತಿ ನೀಡಿತ್ತು. ಈ ಪಟ್ಟಿಯಲ್ಲಿ ತಮ್ಮ ಹೆಸರು ನಮೂದಿಲ್ಲದರಿಂದ ರವೀಂದ್ರನಾಥ್‌ ಅವರು ರಾಜೀನಾಮೆ ನೀಡಿದ್ದಾರೆ.

ಇನ್ನು, ಟಿ.ಸುನೀಲ್ ಕುಮಾರ್ ಅವರು ಶುಕ್ರವಾರ ನಿವೃತ್ತಿಯಾಗಲಿದ್ದಾರೆ. ನಿವೃತ್ತಿಗೆ ಕೇವಲ ಎರಡು ದಿನ ಬಾಕಿ ಇರುವಾಗಲೇ ರಾಜ್ಯ ಸರ್ಕಾರ ಅವರಿಗೆ ಬಿಡ್ತಿ ನೀಡಿದ್ದು, ಒಂದು ದಿನದ ಮಟ್ಟಿಗೆ ಟಿ ಸುನಿಲ್ ಕುಮಾರ್ ಅವರು ಡಿಜಿಪಿಯಾಗಿ ಸೇವೆ ಸಲ್ಲಿಸಲಿದ್ದಾರೆ.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ರವೀಂದ್ರ ನಾಥ್, ಭಾರತೀಯ ಪೊಲೀಸ್ ಇಲಾಖೆಗೆ ತಾವು ಬುಧವಾರ ರಾತ್ರಿ ರಾಜೀನಾಮೆ ನೀಡಿರುವುದಾಗಿ ಸ್ಪಷ್ಟಪಡಿಸಿದರು. ಕಿರಿಯರಿಗೆ ಪ್ರಮೋಷನ್ ನೀಡುವುದು ಅಸಂವಿಧಾನಿಕ. ನನ್ನ ನಿಷ್ಠೆಗೆ ವಿರುದ್ಧವಾಗಿ ಕೆಲಸ ಮಾಡುವಂತೆ ಒತ್ತಾಯಿಸಲಾಗುತ್ತಿತ್ತು. ಆದ್ದರಿಂದ  ರಾಜೀನಾಮೆ ನೀಡಿದ್ದೇನೆ. ತಮ್ಮನ್ನು ಯಾರು ಗುರಿಯಾಗಿಸಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸುವುದಿಲ್ಲ. ಇಲಾಖೆಯಲ್ಲಿ ಟಾರ್ಗೆಟ್ ಮಾಡುವುದು, ಕಿರುಕುಳ ನೀಡುವುದು ಸಾಮಾನ್ಯ. ಹಾಗಂತ ಎಲ್ಲವನ್ನೂ ಒಪ್ಪಿಕೊಂಡು ಸಾಗಬಾರದು. ಒಂದು ದಿನವಾದರೂ ತಪ್ಪಿನ ವಿರುದ್ಧ ಹೋರಾಡಬೇಕು ಎಂದರು. ಡಿಜಿ ಅವರಿಗೆ 300ರೂ ಜಾಸ್ತಿ ಸಂಬಳ ದೊರಕುತ್ತದೆ ಅಷ್ಟೇ. ಆದರೆ ನಮಗೆ ಸಿಗುವುದು ಮಾನಸಿಕ ನೆಮ್ಮದಿ ಎಂದರು.

ತಾವು ಈ ಹಿಂದೆ ಮೂರು ಬಾರಿ ರಾಜೀನಾಮೆ ನೀಡಲು ಮುಂದಾಗಿದ್ದಾಗಿ ತಿಳಿಸಿದ ಅವರು, ವೃತ್ತಿಯಲ್ಲಿ ದೋಷವಿರುವುದರಿಂದ ತಮಗೆ ಪ್ರಮೋಷನ್ ಸಿಗಲಿಲ್ಲ ಎಂದು ಕುಟುಂಬಸ್ಥರು, ಆಪ್ತರು ಅಂದುಕೊಳ್ಳುವುದು ಉಂಟು ಎಂದು ಅವರು ಬೇಸರ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!