ಪಡುಬಿದ್ರಿ: ಒಂದೇ ಕುಟುಂಬದ ನಾಲ್ವರಿಗೆ ಕೋವಿಡ್ ದೃಢ, ಬಾದೆಟ್ಟು ಸೀಲ್‌ಡೌನ್
ಪಡುಬಿದ್ರಿ: ಕ್ವಾರಂಟೈನ್ ಕೇಂದ್ರದಲ್ಲಿ ಅವಧಿ ಮುಗಿಸಿ ಹೋಂ ಕ್ವಾರಂಟೈನ್ ಆಗಿದ್ದ ಒಂದೇ ಕುಟುಂಬದ ನಾಲ್ವರಿಗೆ ಸೋಮವಾರ ಕೋವಿಡ್ ದೃಢಪಟ್ಟಿದೆ.
ಪಡುಬಿದ್ರಿಯ ಪಡುಹಿತ್ಲ ಬಳಿಯ ಬಾದೆಟ್ಟು ಪ್ರದೇಶದ 38 ವಯಸ್ಸಿನ ಮಹಿಳೆ ಮತ್ತು 46 ಮತ್ತು 16 ಹಾಗೂ 40 ವಯೋಮಾನದ ಪುರುಷರಾಗಿದ್ದು, ಮಹಾರಾಷ್ಟ್ರದಿಂದ ಬಂದು ಕಾರ್ಕಳದಲ್ಲಿ ಕ್ವಾರಂಟೈನ್ ಮುಗಿಸಿ, ಹೋಂ ಕ್ವಾರಂಟೈನ್‌ನಲ್ಲಿದ್ದರು. ನಾಲ್ವರನ್ನೂ ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು ಕ್ವಾರಂಟೈನ್ ನಲ್ಲಿದ್ದಾಗ ಜತೆಗಿದ್ದ ಇನ್ನೊಬ್ಬರು ಮಹಿಳೆಗೆ ಕೋವಿಡ್ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು.
ಅವರ ಪರೀಕ್ಷಾ ವರದಿ ಬರುವ ಮೊದಲೇ ಇವರನ್ನು ಮನೆಗೆ ಕಳುಹಿಸಲಾಗಿತ್ತು. ಇವರ ಜತೆಗಿದ್ದ ಮಹಿಳೆ ಈಗಾಗಲೇ ಕುಂದಾಪುರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮೂರು ವರ್ಷದ ಮಗುವಿಗೆ ಕೋವಿಡ್ ನೆಗೆಟಿವ್ ಆಗಿದ್ದು, ಅಜ್ಜಿ ಮನೆಯಲ್ಲಿದೆ.
ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಪಡುಬಿದ್ರಿ ಪಿಎಸ್‌ಐ ಸುಬ್ಬಣ್ಣ, ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಿ. ಬಿ. ರಾವ್, ಪಡುಬಿದ್ರಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಂಚಾಕ್ಷರಿ ಕೇರಿಮಠ್, ಹೆಜಮಾಡಿ ವಿಎ ಅರುಣ್ ಕುಮಾರ್, ಪಡುಬಿದ್ರಿ ಗ್ರಾಮಲೆಕ್ಕಾಧಿಕಾರಿ ಶ್ಯಾಮ್ ಸುಂದರ್ ಭೇಟಿ ನೀಡಿದ್ದಾರೆ.