ಭೋವಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ- ಕೋಟ ಶ್ರೀನಿವಾಸ ಪೂಜಾರಿಗೆ ಕೋಟಿ ಕೋಟಿ ಲಂಚ: ಗೂಳಿಹಟ್ಟಿ ಶೇಖರ್ ಗಂಭೀರ ಆರೋಪ
ಹೊಸದುರ್ಗ: ಲೋಕಸಭೆ ಚುನಾವಣೆಯಲ್ಲಿ ಜಯ ಸಾಧಿಸಿರುವ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅವರು ಗಂಭೀರ ಆರೋಪ ಮಾಡಿದ್ದು, “ಬಿಜೆಪಿ ಅಧಿಕಾರವಧಿಯಲ್ಲಿ ‘ಭೋವಿ ಅಭಿವೃದ್ಧಿ ನಿಗಮ’ದಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದೆ. ಸಮಾಜ ಕಲ್ಯಾಣ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಲಂಚ ಸಂದಾಯವಾಗಿದೆ” ಎಂದು ಆರೋಪಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿರುವ ಸಂದರ್ಭದಲ್ಲಿ ಗೂಳಿಹಟ್ಟಿ ಮಾಡಿದ ಈ ಆರೋಪ ರಾಜಕೀಯ ಸಂಚಲನ ಸೃಷ್ಟಿಸಿದೆ.
13 ನಿಮಿಷಗಳ ಆಡಿಯೊ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಗೂಳಿಹಟ್ಟಿ, ” ‘ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಕೊನೆಯ ಮೂರು ತಿಂಗಳು ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಬಿಜೆಪಿ ಅಧಿಕಾರವಧಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ಆಗ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರಿಗೂ ಇದರಲ್ಲಿ ಪಾಲಿದೆ” ಎಂದು ದೂರಿದ್ದಾರೆ.