ಎನ್‌ಡಿಎ ನಾಯಕರ ಸಭೆ ಅಂತ್ಯ, ಮೋದಿ ಸರ್ಕಾರ ರಚನೆಗೆ ಬೆಂಬಲ ಪತ್ರ ನೀಡಿದ ನಿತೀಶ್, ಚಂದ್ರಬಾಬು ನಾಯ್ಡು

ನವದೆಹಲಿ,ಜೂ.05(ಉಡುಪಿ ಟೈಮ್ಸ್ ವರದಿ) : ತೀವ್ರ ಕುತೂಹಲ ಮೂಡಿಸಿದ್ದ ಎನ್ ಡಿಎ ನಾಯಕರ ಸಭೆ ಅಂತ್ಯವಾಗಿದ್ದು, ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಗೆ ಟಿಡಿಪಿ ಹಾಗೂ ಜೆಡಿಯು ಸೇರಿದಂತೆ ಎಲ್ಲಾ ಮಿತ್ರ ಪಕ್ಷಗಳು ಒಪ್ಪಿಗೆ ಸೂಚಿಸಿವೆ.

ಮೋದಿ ಅವರು ಜೂನ್ 7 ರಂದು ಸಂಜೆ 5ಕ್ಕೆ ರಾಷ್ಟ್ರಭವನಕ್ಕೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಮೋದಿ ಅವರಿಗೆ ಎನ್ ಡಿಎ ನಾಯಕರು ಸಾಥ್ ನೀಡಲಿದ್ದಾರೆ.

ಇಂದು ಮೋದಿ ಅಧ್ಯಕ್ಷತೆಯಲ್ಲಿ ನಡೆದ ಎನ್ ಡಿಎ ಸಭೆಯಲ್ಲಿ ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು, ಜೆಡಿಯು ಮುಖ್ಯಸ್ಥ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಎಲ್‌ಜೆಪಿ(ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಕೂಡ ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಟಿಡಿಪಿ 16, ಜೆಡಿಯು 12, ಶಿಂಧೆ ನೇತೃತ್ವದ ಶಿವಸೇನೆ 7 ಮತ್ತು ಎಲ್‌ಜೆಪಿ(ರಾಮ್ ವಿಲಾಸ್) 5 ಸ್ಥಾನಗಳನ್ನು ಗೆದ್ದು ಮೋದಿ 3ನೇ ಬಾರಿಗೆ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ) ನಾಯಕರು ಔಪಚಾರಿಕವಾಗಿ ಮೋದಿಯವರ ನಾಯಕತ್ವವನ್ನು ಬೆಂಬಲಿಸಿದ್ದು, ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಗೆ ಬೆಂಬಲ ಪತ್ರ ನೀಡಿವೆ ಎಂದು ಉನ್ನತ ರಾಜಕೀಯ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!