ಎನ್‌ಡಿಎ ಜೊತೆಗೆ ನಿಲ್ಲುತ್ತೇವೆ: ಬೆಂಬಲ ಪುನರುಚ್ಛರಿಸಿದ ಚಂದ್ರಬಾಬು ನಾಯ್ಡು
ಹೊಸದಿಲ್ಲಿ: ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಬಿಜೆಪಿ ನೇತೃತ್ವದ ಎನ್‌ಡಿಎಗೆ ತಮ್ಮ ಬೆಂಬಲವನ್ನು ಪುನರುಚ್ಛರಿಸಿದ್ದಾರೆ ಹಾಗೂ ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸಲು ತಮ್ಮ ಪಕ್ಷ ಬಿಜೆಪಿಯನ್ನು ಬೆಂಬಲಿಸಲಿದೆ ಎಂದು ಇಂದು ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.
“ನಾನು ದಿಲ್ಲಿಗೆ ಹೋಗುತ್ತಿದ್ದೇನೆ. ಮತದಾರರ ಬೆಂಬಲ ಖುಷಿ ನೀಡಿದೆ. ರಾಜಕಾರಣದಲ್ಲಿ ಏಳು ಬೀಳುಗಳು ಸಹಜ. ಇದೊಂದು ಐತಿಹಾಸಿಕ ಚುನಾವಣೆ. ಟಿಡಿಪಿ ಇಂದು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪಕ್ಷ ಕಾರ್ಯಕರ್ತರ ಅಪಾರ ಶ್ರಮವಿದೆ. ಪ್ರಜಾಪ್ರಭುತ್ವ ರಕ್ಷಣೆಗಾಗಿ ಐದು ವರ್ಷ ಹೋರಾಡಿದೆವು. ಇಂದು ಯಶಸ್ವಿಯಾಗಿದ್ದೇವೆ,” ಎಂದು ಅವರು ಹೇಳಿದರು.
ಚುನಾವಣಾ ಫಲಿತಾಂಶ ಘೋಷಣೆಯ ನಂತರ ಬಿಜೆಪಿಗೆ ಸ್ವಂತ ಬಲದ ಬಹುಮತ ದೊರೆಯದೆ ಇರುವುದರಿಂದ ಮೈತ್ರಿಪಕ್ಷಗಳಾದ ಟಿಡಿಪಿ ಹಾಗೂ ಜೆಡಿಯು ನೆರವಿನೊಂದಿಗೆ ಸರಕಾರ ರಚಿಸಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟವಾದ ಇಂಡಿಯಾ, ಈ ಎರಡು ಪಕ್ಷಗಳ ನಾಯಕರಾದ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಅವರನ್ನು ತನ್ನತ್ತ ಸೆಳೆಯಲು ನಿನ್ನೆಯಿಂದಲೇ ಕಸರತ್ತು ಪ್ರಾರಂಭಿಸಿತ್ತು. ಆದರೆ, ಇದರ ಬೆನ್ನಿಗೇ ಚಂದ್ರಬಾಬು ನಾಯ್ಡು ನೀಡಿರುವ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದ್ದು, ಮತ್ತೊಬ್ಬ ಎನ್ಡಿಎ ನಾಯಕರಾದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಇಂದು ಯಾವ ನಿರ್ಧಾರ ಪ್ರಕಟಿಸಬಹುದು ಎಂಬುದರ ಮೇಲೆ ಎನ್ಡಿಎ ಸರಕಾರ ರಚನೆಯ ಸಾಧ್ಯತೆ ಅವಲಂಬಿತವಾಗಿದೆ.