ಲೋಕಸಭೆ ಚುನಾವಣೆ ಫಲಿತಾಂಶ: ಪ್ರಧಾನಿ ಮೋದಿ ವಿರುದ್ಧ ಜನಾದೇಶ- ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಭಾರತದ ಜನತೆಯ ಗೆಲುವಾಗಿದ್ದು, ತಮ್ಮ ಹೆಸರಲ್ಲಿ ಬಿಜೆಪಿಗೆ ಮತ ಕೇಳಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಜನಾದೇಶವಾಗಿದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಎಐಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಪ್ರಕಟವಾಗಿರುವ ಚುನಾವಣಾ ಫಲಿತಾಂಶ, ಸಾರ್ವಜನಿಕರ ಫಲಿತಾಂಶವಾಗಿದ್ದು, ಪ್ರಜಾಪ್ರಭುತ್ವದ ಗೆಲುವು ಆಗಿದೆ. ಇದು ಪ್ರಧಾನಿ ಮೋದಿ ಮತ್ತು ಜನರ ನಡುವಿನ ಯುದ್ಧ ಎಂದು ನಾವು ಹೇಳುತ್ತಿದ್ದೇವು ಎಂದರು.
ಜನಾದೇಶವನ್ನು ಅತ್ಯಂತ ಗೌರವಯುತದಿಂದ ಸ್ವೀಕರಿಸುತ್ತೇವೆ. ಈ ಬಾರಿ ಜನರು ಯಾವುದೇ ಒಂದು ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿಲ್ಲ. ಅದರಲ್ಲೂ ಬಿಜೆಪಿ ‘ಒಬ್ಬ ವ್ಯಕ್ತಿ, ಒಂದು ಮುಖ’ ಎಂಬ ಆಧಾರದ ಮೇಲೆ ಮತ ಕೇಳಿತ್ತು. ಈ ಚುನಾವಣಾ ಫಲಿತಾಂಶ ಅವರ ರಾಜಕೀಯ ಮತ್ತು ನೈತಿಕತೆಯ ಸೋಲು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಜನತೆ ದೇಶದ ರಾಜಕೀಯ ಮತ್ತು ಸಂವಿಧಾನ ಅಪಾಯದಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಅವರು ಸಂವಿಧಾನವನ್ನು ರಕ್ಷಿಸಿದ್ದಾರೆ. ಅವರ ಕಾಂಗ್ರೆಸ್ ಮತ್ತು ವಿಪಕ್ಷಗಳ ಮೈತ್ರಿಕೂಟ ಬೆಂಬಲಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟ 18 ನೇ ಲೋಕಸಭೆ ಚುನಾವಣೆಯಲ್ಲಿ “ಅತ್ಯಂತ ಪ್ರತಿಕೂಲ ವಾತಾವರಣದಲ್ಲಿ ಹೋರಾಡಿತು. ಸರ್ಕಾರಿ ಯಂತ್ರ ಪ್ರತಿ ಹಂತದಲ್ಲೂ ಅಡೆತಡೆಗಳನ್ನು ಸೃಷ್ಟಿಸಿತ್ತು. ಬ್ಯಾಂಕ್ ಖಾತೆ ಸ್ಥಗಿತದಿಂದ ಹಿಡಿದು ಅನೇಕ ವಿಪಕ್ಷ ನಾಯಕರ ವಿರುದ್ಧ ದಾಳಿ ನಡೆಸಲಾಗಿತ್ತು. ಆರಂಭದಿಂದ ಅಂತ್ಯದವರೆಗೂ ಕಾಂಗ್ರೆಸ್ ಪ್ರಚಾರ ಸಕಾರಾತ್ಮಕವಾಗಿತ್ತು. ಹಣದುಬ್ಬರ, ನಿರುದ್ಯೋಗ, ಕೃಷಿ ಬಿಕ್ಕಟ್ಟು ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಾಳಿಯ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದೇವು ಎಂದ ಖರ್ಗೆ, ಪ್ರಧಾನಿ ಮೋದಿ ನಡೆಸಿದ ಪ್ರಚಾರ ಇತಿಹಾಸದಲ್ಲಿ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಿದರು.