ವಿಪಕ್ಷಗಳು ಕ್ಷುಲ್ಲಕವಾಗಿ ಕಂಡಿದ್ದವು.. ಎನ್ ಡಿಎ ಬಿಟ್ಟು ಎಲ್ಲೂ ಹೋಗಲ್ಲ: ನಿತೀಶ್ ಕುಮಾರ್
ಪಾಟ್ನಾ: ಕೇಂದ್ರದಲ್ಲಿ ಸರ್ಕಾರ ರಚನೆಗೆ INDIA ಒಕ್ಕೂಟದ ನಾಯಕರು ಬಿಹಾರ ಸಿಎಂ ಹಾಗೂ ಜೆಡಿಯು ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ರನ್ನು ಸಂಪರ್ಕಿಸಲು ಯತ್ನಿಸುತ್ತಿರುವಂತೆಯೇ ಇತ್ತ ತಾವು ಎನ್ ಡಿಎ ಮೈತ್ರಿಕೂಟ ಬಿಟ್ಟು ಎಲ್ಲೂ ಹೋಗಲ್ಲ ಎಂದು ಜೆಡಿಯು ಸ್ಪಷ್ಟಪಡಿಸಿದೆ.
ಹಾಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಬಾರದ ಹಿನ್ನಲೆಯಲ್ಲಿ ಇದೀಗ ಆ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಮಿತ್ರಪಕ್ಷಗಳ ಮೇಲೆ ಅವಲಂಬಿತವಾಗಬೇಕಾದ ಅನಿವಾರ್ಯತೆ ಎದುರಾಗಿರುವಂತೆಯೇ ಬಿಹಾರದ ಜೆಡಿಯು ಪಕ್ಷದ ನಿತೀಶ್ ಕುಮಾರ್ ಮತ್ತು ಆಂಧ್ರ ಪ್ರದೇಶದ ತೆಲುಗುದೇಶಂ ಪಕ್ಷದ ಚಂದ್ರಬಾಬು ನಾಯ್ಡು ಇದೀಗ ಕಿಂಗ್ ಮೇಕರ್ ಗಳಾಗಿ ಪರಿವರ್ತನೆಯಾಗಿದ್ದಾರೆ.
ಲೋಕಸಭೆಗೆ 272 ಸ್ಥಾನಗಳು ಸರಳ ಬಹುಮತವಾಗಿದ್ದು ಎನ್ಡಿಎ ಮೈತ್ರಕೂಟ 296 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು 228 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಇಂಡಿಯಾ ಮೈತ್ರಿಕೂಟಕ್ಕೆ ಸರಳ ಬಹುಮತಕ್ಕೆ ಇನ್ನು 44 ಸ್ಥಾನಗಳು ಬೇಕಿರುವುದರಿಂದ ಸ್ವತಂತ್ರ್ಯವಾಗಿ ನಿಂತು ಗೆದ್ದಿರುವ ಅಭ್ಯರ್ಥಿಗಳನ್ನು ಹಾಗೂ ಎನ್ ಡಿಎ ಮೈತ್ರಿಕೂಟದಲ್ಲಿರುವ ಅಭ್ಯರ್ಥಿಗಳನ್ನು ತಮ್ಮತ್ತ ಸೆಳೆಯಲು ಕರಸತ್ತು ನಡೆಸುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಟಿಡಿಪಿ 16 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ ಬಿಹಾರದಲ್ಲಿ ಜೆಡಿಯು 14 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎನ್ ಡಿಎ ಮೈತ್ರಿಕೂಟದಲ್ಲಿ ಈ ಎರಡು ಪಕ್ಷಗಳೇ ಪ್ರಮುಖ ಪಕ್ಷವಾಗಿದೆ.
ಈ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ರನ್ನು ತನ್ನತ್ತ ಸೆಳೆಯಲು INDIA ಮೈತ್ರಿಕೂಟ ಯತ್ನಿಸುತ್ತಿದೆ. ಹೀಗಿರುವಾಗಲೇ ಅತ್ತ ಜೆಡಿಯು ತಾನು ತನ್ನನಿರ್ಧಾರಕ್ಕೆ ಬದ್ಧವಾಗಿದ್ದು, ಎನ್ ಡಿಎ ಮೈತ್ರಿಕೂಟ ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿಪಕ್ಷಗಳು ಕ್ಷುಲ್ಲಕವಾಗಿ ಕಂಡಿದ್ದವು
ಈ ಬಗ್ಗೆ ಮಾತನಾಡಿರುವ ಜೆಡಿಯು ವಕ್ತಾರ ಕೆ.ಸಿ ತ್ಯಾಗಿ, ”ನಮ್ಮ ನಾಯಕರು ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅವರ ನಡೆಯನ್ನು ಅನುಸರಿಸುತ್ತೇವೆ ಮತ್ತು ಗೌರವಿಸುತ್ತೇವೆ. ಫಲಿತಾಂಶಗಳು ಹೊರಬರಲಿ. ನಿತೀಶ್ ಕುಮಾರ್ ಅವರು ಬಿಹಾರದ ಜನರಿಗಾಗಿ ಯಾವಾಗಲೂ ಯೋಚಿಸುತ್ತಾರೆ ಮತ್ತು ಅವರ ನಿರ್ಧಾರವು ಸರ್ವೋಚ್ಚವಾಗಿರುತ್ತದೆ.
ವಿಪಕ್ಷಗಳು ಜೆಡಿಯು ಪಕ್ಷವನ್ನು ಕ್ಷುಲ್ಲಕವಾಗಿ ಕಂಡಿದ್ದವು. ಅಂತೆಯೇ ನಾವು ನಮ್ಮ ಹಿಂದಿನ ನಿಲುವನ್ನು ಮುಂದುವರಿಸುತ್ತೇವೆ. ನಿತೀಶ್ ಕುಮಾರ್ ನೇತೃತ್ವದಲ್ಲಿ ಜೆಡಿಯು ಮತ್ತೊಮ್ಮೆ ಎನ್‌ಡಿಎಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸುತ್ತದೆ. ನಾವು ಎನ್‌ಡಿಎ ಜೊತೆಗಿದ್ದೇವೆ, ನಾವು NDA ಜೊತೆಗೇ ಮುಂದುವರಿಯುತ್ತೇವೆ ಎಂದು ಹೇಳಿದ್ದಾರೆ.