ಲೋಕಸಭಾ ಚುನಾವಣೆ ಫಲಿತಾಂಶ: INDIA ಒಕ್ಕೂಟ ಸೇರಿದರೆ ನಿತೀಶ್‌ಗೆ ಉಪಪ್ರಧಾನಿ ಪಟ್ಟ ಆಫರ್?
ಹೊಸದಿಲ್ಲಿ : ಭಾರತೀಯ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಅಂತಿಮ ಘಟ್ಟ ತಲುಪಿದ್ದು, INDIA ಒಕ್ಕೂಟವು ಸರಕಾರ ರಚನೆಗೆ ಕಸರತ್ತು ಮುಂದುವರೆಸಿದ್ದು ಕಿಂಗ್ ಮೇಕರ್ ಗಳಾದ ಜೆಡಿಯು ಮತ್ತು ಟಿಡಿಪಿಯ ಜೊತೆ ಮಾತುಕತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ನಿತೀಶ್ ಕುಮಾರ್ ಅವರಿಗೆ INDIA ಒಕ್ಕೂಟ ಸೇರಿದರೆ ಉಪಪ್ರಧಾನಿ ಪಟ್ಟ ನೀಡುವ ಆಫರ್ ನೀಡಲಾಗಿದೆ ಎನ್ನಲಾಗಿದೆ.
ಆಂಧ್ರಪ್ರದೇಶದಲ್ಲಿ ಪುಟಿದೆದ್ದಿರುವ ತೆಲುಗು ದೇಶಂ ಪಾರ್ಟಿ (ಟಿಡಿಪಿ)ಯು ವಿಧಾನಸಭೆಯಲ್ಲೂ ಜಯಭೇರಿ ಭಾರಿಸಿದೆ. ತೆಲುಗು ದೇಶಂ ಪಾರ್ಟಿಯನ್ನು ಸಂಪರ್ಕಿಸಿರುವ INDIA ನಾಯಕರು, ಒಕ್ಕೂಟ ಸೇರಿ ಸರಕಾರ ರಚನೆಗೆ ನೆರವಾದರೆ ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 7ಕ್ಕೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಜೆ 5 ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದಾರೆ.
ಈ ಚುನಾವಣೆಯಲ್ಲಿ NDA ಒಕ್ಕೂಟವು ಕನಿಷ್ಠ 292 ಸ್ಥಾನ ಗಳಲ್ಲಿ ಮುನ್ನಡೆ ಸಾಧಿಸಿದ್ದು, INDIA ಒಕ್ಕೂಟವು 234 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿಯು 239 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೂ ಸರಳ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. INDIA ಒಕ್ಕೂಟದಲ್ಲಿ ಕಾಂಗ್ರೆಸ್ ಪಕ್ಷವು ಕನಿಷ್ಠ 100 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಎರಡನೇ ಅತೀ ದೊಡ್ಡ ಪಕ್ಷಗಾಗಿ ಹೊರಹೊಮ್ಮಿದೆ.