ಬಾಲ್ ಕೋಟ್ ವಾಯುದಾಳಿ ನಂತರ ಭಾರತ ದಾಳಿ ಮಾಡಲು ಸಿದ್ದವಾಗಿತ್ತು, ಪಾಕಿಸ್ತಾನ ಭೀತಿಯಿಂದ ಹಿಂದೆ ಸರಿಯಿತು!
ನವದೆಹಲಿ: ಬಾಲಾಕೋಟ್ ವಾಯು ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ಮಿಲಿಟರಿ ಆಕ್ರಮಣ ಮಾಡುತ್ತಿದ್ದರೆ ಪಾಕಿಸ್ತಾನದ ಫಾರ್ವರ್ಡ್ ಬ್ರಿಗೇಡ್ ಗಳನ್ನು ನಾಶಮಾಡಲು ಭಾರತ ಸಿದ್ಧವಾಗಿತ್ತು, ಅದಕ್ಕೆ ತಕ್ಕಂತೆ ನಮ್ಮ ಮಿಲಿಟರಿ ಆಕ್ರಮಣದ ಶೈಲಿ ಪಾಕಿಸ್ತಾನ ವಿರುದ್ಧ ತೀವ್ರವಾಗಿತ್ತು ಎಂದು ವಾಯುಪಡೆಯ ಮಾಜಿ ಮುಖ್ಯಸ್ಥ ಬಿ.ಎಸ್.ಧಾನೋವಾ ಹೇಳಿದ್ದಾರೆ.
ಪಾಕಿಸ್ತಾನ ಮುಸ್ಲಿಂ ಲೀಗ್-ಎನ್(ಪಿಎಂಎಲ್-ಎನ್) ನಾಯಕ ಅಯಾಝ್ ಸಾದಿಖ್ ಅವರು ನ್ಯಾಶನಲ್ ಅಸೆಂಬ್ಲಿಯಲ್ಲಿ ಕಳೆದ ವರ್ಷದ ಬಾಲಾಕೋಟ್ ವಾಯುದಾಳಿ, ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಬಿಡುಗಡೆಗೆ ಮುನ್ನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷ್ ಹೇಳಿದ್ದ ಮಾತು, ಆಗ ಅಲ್ಲಿನ ಸೇನಾ ಮುಖ್ಯಸ್ಥರಿಗೆ ಉಂಟಾದ ಭೀತಿ ಬಗ್ಗೆ ಮಾತನಾಡಿರುವ ವಿಡಿಯೊ ವೈರಲ್ ಆಗಿದ್ದು ಇದಕ್ಕೆ ಸಂಬಂಧಪಟ್ಟಂತೆ ಬಿ ಎಸ್ ಧಾನೋವಾ ಪ್ರತಿಕ್ರಿಯಿಸಿದ್ದಾರೆ.
ಅಭಿನಂದನ್ ಅವರ ತಂದೆ ಮತ್ತು ನಾನು ಒಟ್ಟಿಗೆ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದು, ಕಳೆದ ವರ್ಷ ಅಭಿನಂದನ್ ವಾಯುದಾಳಿಗೆ ಹೋಗಿದ್ದ ಸಂದರ್ಭದಲ್ಲಿ ನಾನು ಅಹುಜಾ ಹಿಂತಿರುಗಿ ಬರಲಿಕ್ಕಿಲ್ಲ, ಆದರೆ ಅಭಿನಂದನ್ ಬರುತ್ತಾರೆ ಎಂದು ಹೇಳಿದ್ದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನಮ್ಮ ಯುದ್ಧ ಕಮಾಂಡರ್ ಅಹುಜಾರನ್ನು ಬಂಧಿಸಿ ಗುಂಡಿಕ್ಕಿ ಸಾಯಿಸಿದ್ದರು. ಅದೇ ನನ್ನ ಮನಸ್ಸಿನಲ್ಲಿ ಓಡುತ್ತಿತ್ತು. ಅಲ್ಲಿ ಎರಡು ಭಾಗಗಳಿವೆ ಎಂದು ನಾನು ಹೇಳಿದ್ದೆ. ಪಾಕಿಸ್ತಾನದ ಮೇಲಿದ್ದ ತೀವ್ರ ಒತ್ತಡ ರಾಜತಾಂತ್ರಿಕ ಮತ್ತು ರಾಜಕೀಯವಾದದ್ದು. ಆದರೆ ಅಲ್ಲಿ ಮಿಲಿಟರಿ ನಿಲುವು ಕೂಡ ಇತ್ತು ಎಂದು ಎಎನ್ಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
ಪಾಕಿಸ್ತಾನ ಸೇನಾ ಮುಖ್ಯಸ್ಥರ ಕೈಕಾಲುಗಳು ನಡುಗುತ್ತಿದ್ದವು ಎಂದು ಅಲ್ಲಿನ ಸಂಸದ ಹೇಳಲು ಕಾರಣ ನಮ್ಮ ಮಿಲಿಟರಿ ಆಕ್ರಮಣ ಶೈಲಿ ಪರಿಣಾಮಕಾರಿ ಮಟ್ಟದಲ್ಲಿತ್ತು. ಫೆಬ್ರವರಿ 27ರಂದು ಪಾಕಿಸ್ತಾನ ಸೇನೆ ನಮ್ಮ ಯಾವುದಾದರೂ ಮಿಲಿಟರಿ ಮೇಲೆ ಆಕ್ರಮಣ ಮಾಡುತ್ತಿದ್ದರೆ ಅವರ ಫಾರ್ವರ್ಡ್ ಬ್ರಿಗೇಡ್ ಗಳನ್ನು ಸಂಪೂರ್ಣವಾಗಿ ನಾಶ ಮಾಡುವ ಸ್ಥಿತಿಯಲ್ಲಿ ನಾವಿದ್ದೆವು. ಅವರಿಗೆ ನಮ್ಮ ಸಾಮರ್ಥ್ಯ ಏನು ಎಂಬುದು ಗೊತ್ತಿದೆ ಎಂದರು.
ಪಾಕಿಸ್ತಾನದಲ್ಲಿ ವೈಮಾನಿಕ ದಾಳಿ ನಡೆದಾಗ ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿದ್ದ ಧನೋವಾ, ಅಭಿನಂದನ ಬಿಡುಗಡೆಯನ್ನು ಭದ್ರಪಡಿಸಿಕೊಳ್ಳಲು ಭಾರತೀಯ ಮಿಲಿಟರಿಗೆ ದಾಳಿ ಮಾಡಲು ಸಾಧ್ಯವಿರಲಿಲ್ಲ, ಆದರೆ ಪಾಕಿಸ್ತಾನ ಮಿಲಿಟರಿಯ ಮೇಲೆ ಒತ್ತಡ ಹೇರಲು ಸಾಧ್ಯವಿತ್ತು, ನಂತರ ಅವರ ಬಿಡುಗಡೆ ಪ್ರಕ್ರಿಯೆ ಸಂಪೂರ್ಣವಾಗಿ ರಾಜಕೀಯ ಮಟ್ಟದ ತೀರ್ಮಾನವಾಗಿತ್ತು ಎಂದಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆದ ಆತ್ಮಹತ್ಯಾ ದಾಳಿಯಿಂದ 40 ಮಂದಿ ಯೋಧರು ಹುತಾತ್ಮರಾದ ಘಟನೆಗೆ ಪ್ರತಿಯಾಗಿ ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿ ವೇಳೆ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದ ಗಡಿ ದಾಟಿ ಹೋಗಿದ್ದರು. ಆಗ ಅವರನ್ನು ಪಾಕಿಸ್ತಾನ ಸೇನೆ ಬಂಧಿಸಿತ್ತು. ನಂತರ ನಡೆದ ರಾಜಕೀಯ ವಿದ್ಯಮಾನಗಳಲ್ಲಿ ಮಾರ್ಚ್ 1ರಂದು ಬಿಡುಗಡೆಯಾದರು.
ಈ ಬಗ್ಗೆ ಧನೋವಾ ಹೇಳುವುದು ಹೀಗೆ: ಕ್ಯಾ.ಅಭಿನಂದನ್ ಬಿಡುಗಡೆ ರಾಜಕೀಯ ತೀರ್ಮಾನ. ನಾವು ಯುದ್ಧ ಮಾಡಬೇಕೆ, ಬೇಡವೆ ಎಂಬುದು, 27ರ ವಾಯುದಾಳಿ ಸಂಪೂರ್ಣ ಯಶಸ್ವಿಯಾಗಿದ್ದರೆ ಪಾಕಿಸ್ತಾನ ಅದಕ್ಕೆ ಪ್ರತ್ಯುತ್ತರ ನೀಡುತ್ತಿದ್ದರೆ ಪೂರ್ಣ ಪ್ರಮಾಣದಲ್ಲಿ ಪಾಕಿಸ್ತಾನ ಮೇಲೆ ಯುದ್ಧ ಸಾರಬೇಕೆ, ಅಥವಾ ಫಾರ್ವರ್ಡ್ ಬ್ರಿಗೇಡ್ ಗಳನ್ನು ಮಾತ್ರ ಧ್ವಂಸಗೊಳಿಸಬೇಕೆ ಎಂಬುದು ಸರ್ಕಾರದ ಮಟ್ಟದಲ್ಲಿ ನಡೆಯುವ ತೀರ್ಮಾನವಾಗಿತ್ತು ಎಂದಿದ್ದಾರೆ.
ಬಾಲಾಕೋಟ್ ವಾಯುದಾಳಿ ಜೈಶ್ ಇ ಮೊಹಮ್ಮದ್ ಸಂಘಟನೆ ಮತ್ತು ಪಾಕಿಸ್ತಾನದಲ್ಲಿರುವ ಅದರ ಬೆಂಬಲಿತ ಗುಂಪುಗಳಲ್ಲಿ ಭೀತಿಯನ್ನು ಹುಟ್ಟಿಸಿತು. ಪಾಕ್ ಆಕ್ರಮಿತ ಕಾಶ್ಮೀರ ಸೇರಿದಂತೆ ಪಾಕಿಸ್ತಾನದಲ್ಲಿ ತಮ್ಮ ಮೇಲೆ ಭಾರತ ಆಕ್ರಮಣ ಮಾಡಬಹುದೆಂಬ ಭಾವನೆ, ಭೀತಿ ಹುಟ್ಟಿಸಿತು. ನಂತರ ಭಾರತದಲ್ಲಿ ಲೋಕಸಭೆ ಚುನಾವಣೆ ಮುಗಿಯುವವರೆಗೆ ಉಗ್ರಗಾಮಿ ಸಂಘಟನೆಯ ಉಪಟಳವಿರಲಿಲ್ಲ. ಏಕೆಂದರೆ ಭಾರತದ ಮಿಲಿಟರಿ ಸಾಮರ್ಥ್ಯ ಅದಕ್ಕೆ ಮನದಟ್ಟಾಯಿತು.