ಬಿಜೆಪಿ ಅಭ್ಯರ್ಥಿಯಿಂದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗಿನ ಮನೆಗಳಿಗೆ 2000ರೂ. ಹಂಚಿಕೆ- ರಘುಪತಿ ಭಟ್ ಆರೋಪ

ಉಡುಪಿ: ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಮಣಿಪಾಲ ಜೂನಿಯರ್ ಕಾಲೇಜಿನಲ್ಲಿ ಸೋಮವಾರ ಮತದಾನ ಮಾಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಗೆಲುವಿನ ವಿಶ್ವಾಸವಿದೆ. ಮತದಾರರು ನನಗೆ ಮತ ಹಾಕಲು ನಿಶ್ಚಯ ಮಾಡಿದ್ದಾರೆ. ಮತದಾರರ ಮನಸ್ಸಿಗೆ ದೇವರು ಬುದ್ಧಿ ಕೊಡಬೇಕು. ನಿನ್ನೆಯವರೆಗೆ ಶತ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ಎಲ್ಲಾ ಮನೆಗಳಿಗೆ 2000 ರೂ. ಹಂಚಿದ್ದಾರೆ. ಆದರೆ ಉಡುಪಿ ಭಾಗದಲ್ಲಿ ನೀಡಿಲ್ಲ. ತುಂಬಾ ಜನ ಕರೆ ಮಾಡಿ ನನಗೆ ಹೇಳಿದ್ದಾರೆ. ಪದವೀಧರ ಕ್ಷೇತ್ರದಲ್ಲಿ ಮೊದಲ ಬಾರಿ ಹಣ ಹಂಚಿಕೆ ನಡೆದಿದೆ. ನೈರುತ್ಯ ಪದವೀಧರ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲು ಎಂದು ಅವರು ಗಂಭೀರ ಆರೋಪ ಮಾಡಿದರು.

ಈವರೆಗೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಣ ಹಂಚಿಲ್ಲ. ಈ ಬಾರಿಯೂ ಹಂಚಿಲ್ಲ. ಪದವೀಧರ ಕ್ಷೇತ್ರದಲ್ಲೂ ಹಣಕೊಟ್ಟು ಮತ ಪಡೆಯುವ ಪರಿಸ್ಥಿತಿ ಬಂದಿದೆ. ಪರಿವಾರದ ಹಿರಿಯರು ಇದನ್ನು ಗಮನಿಸಬೇಕು. ವಿಧಾನ ಪರಿಷತ್ ಚುನಾವಣೆಗೆ ಕವರ್ ಹಂಚುವ ಸಂಸ್ಕೃತಿ ಇರಲಿಲ್ಲ‌‌ ಎಂದರು.

ಕೆಲವರು ಕರೆ ಮಾಡಿ ಹಣ ಅವರಿಂದ ತೆಗೆದುಕೊಂಡಿದ್ದೇವೆ ಮತ ನಿಮಗೆ ಹಾಕುತ್ತೇವೆ ಎಂದಿದ್ದಾರೆ. ಬಿಜೆಪಿ ಅಭ್ಯರ್ಥಿ ಬಳಿ ಹಣ ಇದೆ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಹಣ ಕೊಟ್ಟು ಮತ ಪಡೆದುಕೊಳ್ಳಬಹುದು ಎಂಬುದು ಸುಳ್ಳು. ಅದು ಈ ಚುನಾವಣೆಯಲ್ಲಿ ಸಾಬೀತಾಗುತ್ತದೆ.

ಮಾಧ್ಯಮದ ಹೆಸರಿನಲ್ಲಿ ಫೇಕ್ ವಿಡಿಯೋ ಹೊರಬಿಟ್ಟಿದ್ದಾರೆ. ರಘುಪತಿ ಭಟ್ ಕಣದಿಂದ ಹಿಂದಕ್ಕೆ ಸರಿದಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಬಿಜೆಪಿಯಲ್ಲಿ ಇರುವವರೆಲ್ಲ ನಮ್ಮವರೇ ಆಗಿದ್ದಾರೆ. ಪಕ್ಷಕ್ಕಾಗಿ ಅಲ್ಲಿ ಇರುತ್ತಾರೆ , ಆದರೆ ನನ್ನನ್ನು ಬೆಂಬಲಿಸುತ್ತಾರೆ. ಬಿಜೆಪಿಯಲ್ಲಿದ್ದೇ ನನಗೆ ಸಹಾಯ ಮಾಡುವವರು ಅನೇಕ ಮಂದಿ ಇದ್ದಾರೆ

ನಾಳೆಯಿಂದ ನಾನು ಮತ್ತೆ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಆಗಿರುತ್ತೇನೆ. ನಾಳೆ ನಾನು ಕೂಡ ವಿಜಯೋತ್ಸವ ಆಚರಿಸುತ್ತೇನೆ. ಯಾವಗಲೂ ನಾನು ಕೌಂಟಿಂಗ್ ಏಜೆಂಟಾಗಿ ಇರುತ್ತಿದ್ದೆ. ಈ ಬಾರಿ ನನ್ನ ಏಜೆಂಟ್ ಮಾಡಿಲ್ಲ. ಉಡುಪಿಯಲ್ಲಿ ಕೋಟ, ಮಂಗಳೂರಿನಲ್ಲಿ ಚೌಟ ಗೆಲ್ಲಬೇಕು. ಬಿಜೆಪಿ ಎಲ್ಲಾ 28 ಸ್ಥಾನ ಗೆಲ್ಲಬೇಕು ಎಂದು ಅವರು ಹಾರೈಸಿದರು.

ಎಕ್ಸಿಟ್ ಪೋಲ್ ನಲ್ಲಿ ಮೋದಿ ಅಲೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಕೂಡ ಮೋದಿಯ ಗೆಲುವಿನ ಮೂಡ್ ನಲ್ಲಿ ಇದ್ದೇನೆ. ನಾನು ಮೋದಿಯನ್ನು ಬಿಟ್ಟು ಇಲ್ಲ. ಮೋದಿ ಗೆಲುವು ಆಗಬೇಕಂತ ನಾವು ಕೂಡ ಬಯಸುತ್ತೇವೆ. ಈ ಚುನಾವಣೆಯೇ ಬೇರೆ ಲೋಕಸಭಾ ಚುನಾವಣೆಯೇ ಬೇರೆ ಎಂದರು.

Leave a Reply

Your email address will not be published. Required fields are marked *

error: Content is protected !!