ಸಂವಿಧಾನದ ವಿಚಾರಗಳನ್ನು ಅರ್ಥ ಮಾಡಿಕೊಂಡ ಮಕ್ಕಳು ಸಮಾಜದ ಬೆಳಕು ಆಗಲು ಸಾಧ್ಯ- ಚಿಂತಕ ನಿಕೇತ್‌ರಾಜ್ ಮೌರ್ಯ

ಉಡುಪಿ, ಜೂ.3: ಸಂವಿಧಾನವನ್ನು ದೈವಿಕ ಗ್ರಂಥವನ್ನಾಗಿಸಬಾರದು. ಅದು ನಮ್ಮ ಪುಸ್ತಕಗಳ ಜೊತೆ ಒಂದು ಪುಸ್ತಕ ಆಗಿ ಇರಬೇಕು. ಆ ಮೂಲಕ ಅದರ ವಿಚಾರಗಳು ನಮ್ಮ ಒಳಗಡೆ ಹೋಗಬೇಕು. ಸಂವಿಧಾನದ ವಿಚಾರಗಳನ್ನು ಅರ್ಥ ಮಾಡಿಕೊಂಡ ಮಕ್ಕಳು ಸಮಾಜದ ಬೆಳಕು ಆಗಲು ಸಾಧ್ಯ ಎಂದು ಚಿಂತಕ ನಿಕೇತ್‌ರಾಜ್ ಮೌರ್ಯ ಹೇಳಿದ್ದಾರೆ.

ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲೆ ವತಿಯಿಂದ ಬನ್ನಂಜೆ ಶ್ರೀ ನಾರಾಯಣಗುರು ಆಡಿಟೋರಿಯಂನಲ್ಲಿ ರವಿವಾರ ಆಯೋಜಿಸಲಾದ ವಿದ್ಯಾರ್ಥಿಗಳಿಗೆ ಉಚಿತ ನೋಟು ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ನೂತನ ಪದಾಧಿ ಕಾರಿಗಳ ಪದಗ್ರಹಣ ಸಮಾರಂಭ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಒಬ್ಬ ದಲಿತ ಐಎಎಸ್ ಅಧಿಕಾರಿ ತನ್ನಂತೆ ತುಳಿತಕ್ಕೆ ಒಳಗಾದ ಸಾವಿರ ದಲಿತ ಮಕ್ಕಳನ್ನು ಓದಿಸಿದರೆ ಮಾತ್ರ ಆತ ನಿಜವಾಗಿಯೂ ಅಂಬೇಡ್ಕರ್ ಋಣ ತೀರಿಸದಂತೆ ಆಗತ್ತದೆ. ತನಗೆ ಸಿಕ್ಕ ಹಕ್ಕು ಮತ್ತು ಅಧಿಕಾರ ನಿಜವಾಗಿಯೂ ಸದುಪಯೋಗ ಆದಂತೆ ಆಗುತ್ತದೆ ಎಂದು ಅವರು ತಿಳಿಸಿದರು.

ಬುದ್ಧ ದಾರಿಯಲ್ಲಿ ನಾವೆಲ್ಲ ಒಟ್ಟಿಗೆ ಸಾಗಬೇಕು. ನಮ್ಮ ದೇಶವನ್ನು ಆವರಿಸಿರುವ ವಿಚಾರ ಕ್ರಾಂತಿಯ ಬರಗಾಲ, ಹಾಹಕಾರವನ್ನು ನಿಗೀಸಬೇಕಾದರೆ ನಾವೆಲ್ಲ ಒಂದಾಗಬೇಕು. ಅಂಬೇಡ್ಕರ್ ಚಿಂತನೆಯಡಿ ಎಲ್ಲ ದಲಿತ ಸಂಘಟನೆಗಳು ಒಂದಾದರೆ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ನಿಕೇತ್‌ರಾಜ್ ಮೌರ್ಯ ತಿಳಿಸಿದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಶಿಕ್ಷಣ ಪಡೆದರೂ ಉದ್ಯೋಗ ಸ್ಥಿತಿ ಇಂದು ನಿರ್ಮಾಣ ವಾಗಿದೆ. ಮೀಸಲಾತಿಯಿಂದ ಇಂದು ದಲಿತರು ಸರಕಾರಿ ಉದ್ಯೋಗ ಪಡೆದುಕೊಂಡಿದ್ದಾರೆ. ಆದರೆ ಈಗ ಎಲ್ಲವನ್ನು ಖಾಸಗೀಕರಣ ಮಾಡುವ ಮೂಲಕ ಉದ್ಯೋಗವನ್ನೇ ಕಸಿದುಕೊಳ್ಳಲಾಗುತ್ತಿದೆ. ಅದಕ್ಕಾಗಿ ನಾವು ಮೀಸಲಾತಿಯ ಹಕ್ಕನ್ನು ಉಳಿಸಿಕೊಳ್ಳಬೇಕು. ಖಾಸಗಿ ಕ್ಷೇತ್ರಗಳಲ್ಲೂ ಮೀಸಲಾತಿ ಜಾರಿಗೆ ಹೋರಾಟ ಮಾಡಬೇಕು ಎಂದು ಹೇಳಿದರು.

ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ವಹಿಸಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡ ವಾಸುದೇವ ಮುದ್ದೂರು, ಹಿರಿಯ ಚಿಂತಕ ಸಂಜೀವ ಬಳ್ಕೂರು, ಸಾಮಾಜಿಕ ಕಾರ್ಯಕರ್ತ ಶ್ರೀರಾಮ ದಿವಾಣ ಉಪಸ್ಥಿತರಿದ್ದರು.

ಜನಪರ ಹೋರಾಟಗಾರ ಜಯನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಮಂಚಿ ಸ್ವಾಗತಿಸಿದರು. ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ರೋಹಿತ್ ಕುಮಾರ್ ಮಲ್ಪೆ ಮತ್ತು ಬಳಗದವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರಗಿತು.

ಸಂವಿಧಾನ ಉಳಿಸುವುದು ನಮ್ಮೆಲ್ಲರ ಹೊಣೆ

ಇಂದು ದಲಿತ, ಆದಿವಾಸಿ ಹೆಣ್ಣು ಮಗಳು ಕೂಡ ನಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್, ಐಎಎಸ್ ಅಧಿಕಾರಿ, ಶಾಸಕರು, ಸಂಸದರು, ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಆಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಅವರಿಗೆ ಈ ಶಕ್ತಿಯನ್ನು ನೀಡಿರುವುದು ಅಂಬೇಡ್ಕರ್ ಬರೆದ ನಮ್ಮ ದೇಶದ ಸಂವಿಧಾನ. ಈ ಸಂವಿಧಾನವನ್ನು ಉಳಿಸಬೇಕಾಗಿರುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ನಿಕೇತ್‌ರಾಜ್ ಮೌರ್ಯ ಹೇಳಿದರು.

ಅಂಬೇಡ್ಕರ್ ಅವರನ್ನು ದೇವರು ಮಾಡಬೇಡಿ. ಅವರಿಗೆ ಗುಡಿ ಕಟ್ಟಬೇಡಿ. ಅಂಬೇಡ್ಕರ್ ಚಿಂತನೆ ನಾವು ಅಳವಡಿಸಬೇಕು. ಇಂದು ಬುದ್ಧನನ್ನು ವಿಷ್ಣುವಿನ ಅವತಾರ ಎಂಬುದಾಗಿ ಹೇಳಿ ದೇವರನ್ನಾಗಿ ಮಾಡಲಾಗಿದೆ. ಅದು ಬುದ್ಧನ ಚಿಂತನೆಗಳ ನಿಜವಾದ ಕೊಲೆಯಾಗಿದೆ. ಅದೇ ರೀತಿ ಅಂಬೇಡ್ಕರ್ ಅವರನ್ನು ದೇವರು ಮಾಡಿದರೆ ಅವರ ಚಿಂತನೆ ಕೂಡ ಸಾಯುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

‘ದೇವರು ಧರ್ಮಗಳ ಹೆಸರಿನಲ್ಲಿ ಮನುಷ್ಯ ಮನುಷ್ಯರ ಮಧ್ಯೆ ಜಾತಿಯ ಗೋಡೆಗಳನ್ನು ಕಟ್ಟಿ ಸಾವಿರಾರು ವರ್ಷಗಳಿಂದ ದಲಿತರನ್ನು ತುಳಿಯಲಾಗಿದೆ. ಶಿಕ್ಷಣದಿಂದ ದಲಿತರನ್ನು ದೂರ ಇಟ್ಟರು. ಭೂಮಿಯ ಒಡೆತನ ಕೂಡ ನೀಡಲಿಲ್ಲ. ಶಾಲೆ, ದೇವಳ, ಮನೆಗಳಿಗೆ ಪ್ರವೇಶ ಇರಲಿಲ್ಲ. ಹೀಗೆ ಸಾವಿರಾರು ವರ್ಷಗಳ ಕಾಲ ಈ ನೆಲದಲ್ಲಿ ಇಂತಹ ಶೋಷಣೆಗಳನ್ನು ಅನುಭವಿಸಿ ಕೊಂಡು ಅನೇಕ ಜಾತಿಗಳು ಬೆಳೆದುಕೊಂಡುಬಂದಿವೆ. ಇದಕ್ಕೆಲ್ಲ ಮುಕ್ತಿ ಕೊಟ್ಟವರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರಮುಖರು. ಅದೇ ರೀತಿ ಬಸವಣ್ಣ, ಕನಕದಾಸರು, ಗಾಂಧೀಜಿ ಕೂಡ ಶೋಷಿತರ ಪರವಾಗಿ ಹೋರಾಟ ಮಾಡಿದರು’

ನಿಕೇತ್‌ರಾಜ್ ಮೌರ್ಯ, ಚಿಂತಕರು

Leave a Reply

Your email address will not be published. Required fields are marked *

error: Content is protected !!