ಇಂದಿನಿಂದ ಹೆದ್ದಾರಿಗಳ ಟೋಲ್ ಶುಲ್ಕ ಶೇ.5 ಹೆಚ್ಚಳ
ಹೊಸದಿಲ್ಲಿ : ದೇಶಾದ್ಯಂತ ಹೆದ್ದಾರಿಗಳನ್ನು ಬಳಕೆ ಮಾಡುವ ವಾಹನ ಚಾಲಕರು ಸೋಮವಾರದಿಂದ ಟೋಲ್‌ಗಳಲ್ಲಿ ಹೆಚ್ಚಿನ ಶುಲ್ಕವನ್ನು ನೀಡಬೇಕಾಗುತ್ತದೆ.
ದೇಶಾದ್ಯಂತ ಹೆದ್ದಾರಿಗಳ ಟೋಲ್ ಶುಲ್ಕವನ್ನು ಸರಾಸರಿ ಶೇ. 5ರಷ್ಟು ಏರಿಕೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದೆ. ಸಾಮಾನ್ಯವಾಗಿ ಟೋಲ್ ಶುಲ್ಕ ಪ್ರತಿವರ್ಷ ಹೆಚ್ಚಾಗುತ್ತದೆ. ಇದರಂತೆ ಎಪ್ರಿಲ್ 1 ರಿಂದ ಪರಿಷ್ಕೃತ ಶುಲ್ಕ ಜಾರಿಯಾಗಬೇಕಿತ್ತು. ಆದರೆ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪರಿಷ್ಕೃತ ಶುಲ್ಕ ಜಾರಿಗೆ ವಿಳಂಬವಾಗಿತ್ತು.
ಪರಿಷ್ಕೃತ ಶುಲ್ಕ 03.06.2024ರಿಂದ ಜಾರಿಗೆ ಬರಲಿದೆ ಎಂದು ಎನ್‌ಎಚ್‌ಎಐಯ ಹಿರಿಯ ಅಧಿಕಾರಿ ರವಿವಾರ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಜಾಲದಲ್ಲಿ ಸರಿಸುಮಾರು 855 ಟೋಲ್ ಪ್ಲಾಝಾಗಳಿವೆ. ಇವುಗಳ ಮೇಲೆ ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಹಾಗೂ ಸಂಗ್ರಹಣೆಗೆ ನಿರ್ಧಾರ) ಕಾಯ್ದೆ, 2008ಕ್ಕೆ ಅನುಗುಣವಾಗಿ ಶುಲ್ಕ ವಿಧಿಸಲಾಗುತ್ತದೆ.