ಶಾಸಕ ಹರೀಶ್ ಪೂಂಜಾ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಮತ್ತೊಂದು ಚಾರ್ಜ್ ಶೀಟ್

ಬೆಳ್ತಂಗಡಿ, ಜೂ.2: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮತ್ತೊಂದು ಚಾರ್ಜ್ ಶೀಟ್ (ದೋಷರೋಪ ಪಟ್ಟಿ) ಸಲ್ಲಿಕೆಯಾಗಿದೆ.

ಸುಮಾರು 8 ತಿಂಗಳ ಹಿಂದೆ ಕಳೆಂಜ ಗ್ರಾಮದಲ್ಲಿ ಅತಿಕ್ರಮಣವಾಗಿದ್ದ ಅರಣ್ಯ ಇಲಾಖೆಯ ಜಾಗವನ್ನು ಅಧಿಕಾರಿಗಳು ತೆರವಿಗೆ ಮುಂದಾದ ವೇಳೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಉಂಟಾದ ಗಲಾಟೆಗೆ ಸಂಬಂಧಿಸಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ಒಟ್ಟು 17 ಮಂದಿಯ ವಿರುದ್ಧ ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಜೂ.1ರಂದು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಲೋಲಾಕ್ಷ ಎಂಬವರು ಮೀಸಲು ಅರಣ್ಯ ಇಲಾಖೆಯ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಯನ್ನು ಉಪ್ಪಿನಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಕಿತ್ತು ಹಾಕಿದ್ದರು. ಇದನ್ನು ವಿರೋಧಿಸಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮತ್ತು ಬಿಜೆಪಿ ಕಾರ್ಯಕರ್ತರು ಅದೇ ಸ್ಥಳದಲ್ಲಿ ಮತ್ತೆ ಮನೆ ನಿರ್ಮಾಣ ಮಾಡಿದ್ದರು. ನಂತರ ಅರಣ್ಯ ಇಲಾಖೆ ಆ ಮನೆಯನ್ನೂ ತೆರವು ಮಾಡಲು 2023ರ ಅಕ್ಟೋಬರ್ 9ರಂದು ಮುಂದಾದಾಗ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮತ್ತು ಇತರರು ಅರಣ್ಯ ಇಲಾಖೆಯ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ವೇಳೆ ಅಧಿಕಾರಿಗಳು ಮತ್ತು ಶಾಸಕರುಗಳ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ದೂರು ನೀಡಿದ್ದರು ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ದೋಷರೋಪ ಪಟ್ಟಿ ಸಲ್ಲಿಕ್ಕೆ: ಈ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಪೊಲೀಸರು ತನಿಖೆ ನಡೆಸಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಸೇರಿ ಒಟ್ಟು 17 ಮಂದಿಯ ವಿರುದ್ಧ ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಜೂ.1ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಶಾಸಕ‌ ಪೂಂಜಾ ವಿರುದ್ದ 3ನೇ ಚಾರ್ಜ್ ಶೀಟ್:

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ವಿರುದ್ದ ಇದೀಗ ಮೂರನೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಬೆಳ್ತಂಗಡಿಯಲ್ಲಿ ಅಕ್ರಮ ಕಲ್ಲು ಕೋರೆ ಆರೋಪಿಗಳ ಬಂಧನ ಹಾಗೂ ಬಳಿಕ ಠಾಣೆಯಲ್ಲಿ ನಡೆದ ಗಲಾಟೆಯ ಬಗ್ಗೆ ಹಾಗೂ ಬಳಿಕ ಪರವಾನಿಗೆಯಿಲ್ಲದೆ ನಡೆದ ಪ್ರತಿಭಟನೆ ಹಾಗೂ ಪೊಲೀಸರಿಗೆ ನಿಂದಿಸಿದ ಬೆದರಿಕೆಯೊಡ್ಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಎರಡು ಚಾರ್ಜ್ ಶೀಟ್ ಸಲ್ಲಿಕೆಯಾಗಿವೆ.

1 thought on “ಶಾಸಕ ಹರೀಶ್ ಪೂಂಜಾ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಮತ್ತೊಂದು ಚಾರ್ಜ್ ಶೀಟ್

Leave a Reply

Your email address will not be published. Required fields are marked *

error: Content is protected !!