ಕಾಪು: ದರೋಡೆಗೆ ಸಂಚು- ಆರು ಮಂದಿಯ ಬಂಧನ
ಕಾಪು, ಜೂ.2: ದರೋಡೆಗೆ ಸಂಚು ರೂಪಿಸಿ ಕಾರಿನಲ್ಲಿ ಮಾರಕಾಯಧಗಳೊಂದಿಗೆ ಸಂಚರಿಸುತ್ತಿದ್ದ ಆರೋಪದಲ್ಲಿ ಆರು ಮಂದಿಯನ್ನು ಕಾಪು ಪೊಲೀಸರು ಶನಿವಾರ ಸಂಜೆ ಕಾಪು ಸಮೀಪದ ಕೋತಲಕಟ್ಟೆ ಎಂಬಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮುಲ್ಕಿಯ ಅಮಿತ್ ರಾಜ್, ಕಾಟಿಪಳ್ಳದ ಪ್ರಕಾಶ್, ವಾಮಂಜೂರು ನೀರುಮಾರ್ಗದ ವರುಣ್, ಸುರತ್ಕಲ್‌ನ ಕಾರ್ತಿಕ್ ಶೆಟ್ಟಿ, ಕಾಟಿಪಳ್ಳದ ಅಭಿಷೇಕ್ ಮತ್ತು ಫರಂಗಿಪೇಟೆಯ ಶ್ರೀಕಾಂತ್ ಶ್ರೀಪತಿ ಬಂಧಿತ ಆರೋಪಿಗಳು.
ಬಂಧಿತರಿಂದ ಕಾರು, ಮಾರಕಾಯುಧಗಳು, ಖಾರದ ಪುಡಿ ಸಹಿತ ಇತರ ವಸ್ತುಗಳನ್ನು ವಶಪಡಿಸಿಕೊಳ್ಳ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯಾವರದ ಬಳಿ ಶನಿವಾರ ಸಂಜೆ ಅನುಮಾನಾಸ್ಪದ ವಾಗಿ ಸಂಚರಿಸುತ್ತಿದ್ದ ಕಾರೊಂದನ್ನು ಕಾಪು ಪೊಲೀಸ್ ವೃತ್ತ ನಿರೀಕ್ಷಕಿ ಜಯಾಶ್ರೀ ಮಾನೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಆರೋಪಿಗಳು ಕಾರನ್ನು ನಿಲ್ಲಿಸದೆ ಕಾಪು ಕಡೆ ಪರಾರಿಯಾಗಿದ್ದಾರೆ. ಬಳಿಕ ಈ ಬಗ್ಗೆ ಕಾಪು ಠಾಣೆಗೆ ಮಾಹಿತಿ ನೀಡಿದ ಜಯಾಶ್ರೀ ಮಾನೆ, ಆರೋಪಿಗಳ ವಾಹನವನ್ನು ಬೆನ್ನಟ್ಟಿಕೊಂಡು ಹೋಗಿದ್ದಾರೆ. ವಿಷಯ ತಿಳಿದ ಕಾಪು ಠಾಣೆಯ ಎಸ್ಸೈ ಅಬ್ದುಲ್ ಖಾದರ್ ಕೂಡಾ ಇನ್ನೊಂದು ವಾಹನದಲ್ಲಿ ಆರೋಪಿಗಳ ವಾಹನವನ್ನು ಬೆನ್ನಟ್ಟಿದ್ದಾರೆ. ಕಾಪುವಿನ ಕೋತಲ್ ಕಟ್ಟೆಯಲ್ಲಿ ಬಳಿ ಆರೋಪಿಗಳು ಸಂಚರಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ತಪಾಸಣೆ ಮಾಡಿದಾಗ ಮಾರಕಾಯುಧಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ದರೋಡೆ ಕೃತ್ಯಕ್ಕೆ ಸಂಚು ರೂಪಿಸಿ ಮಾರಕಾಯುಧಗಳೊಂದಿಗೆ ತೆರಳುತ್ತಿದ್ದರೆನ್ನಲಾಗಿದೆ. ಬಂಧಿತರ ಪೈಕಿ ಓರ್ವ ಎರಡು ವರ್ಷಗಳ ಹಿಂದೆ ಸುರತ್ಕಲ್‌ನಲ್ಲಿ ನಡೆದ ಮಂಗಳಪೇಟೆಯ ಫಾಝಿಲ್ ಹತ್ಯೆ ಪ್ರಕರಣದ ಆರೋಪಿ ಎಂದು ತಿಳಿದುಬಂದಿದೆ.