ಕಳೆದ ಬಾರಿಗಿಂತ ಒಂದು ಸ್ಥಾನ ಹೆಚ್ಚು ಗೆಲುವು, ಕಾಂಗ್ರೆಸ್ ಭ್ರಮೆಯಲ್ಲಿದೆ ಬಿ.ವೈ ವಿಜಯೇಂದ್ರ
ಕುಂದಾಪುರ: ರಾಜ್ಯದಲ್ಲಿ 6 ಕ್ಷೇತ್ರಗಳಿಗೆ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು ಬಂಡಾಯದ ಕಾರಣಕ್ಕೆ ಹೆಚ್ಚು ಹೆಚ್ಚು ಚರ್ಚೆಯಾಗುತ್ತಿದೆ. ಯಾವುದೇ ಗೊಂದಲ ಇಲ್ಲದೆ ನಮ್ಮ ಶಾಸಕರು, ನಾಯಕರು ಕೆಲಸ ಮಾಡುತ್ತಿದ್ದಾರೆ. ಡಾ. ಧನಂಜಯ ಸರ್ಜಿ, ಬೋಜೇಗೌಡ ಮೊದಲ ಪ್ರಾಶಸ್ತ್ಯದ ಮತದಲ್ಲೇ ಗೆಲ್ಲುತ್ತಾರೆಂಬ ವಿಶ್ವಾಸ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ತಾಲೂಕಿನ ಕುಂಭಾಶಿಯ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದ್ದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈಶ್ವರಪ್ಪ, ಧನಂಜಯ ಸರ್ಜಿ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಚರ್ಚೆ ಮಾಡಿದ್ದಾರೆ. ನಾನು ದೇವಸ್ಥಾನದ ಮುಂದೆ ನಿಂತು ಹೇಳುತ್ತಿದ್ದೇನೆ. ಅಭ್ಯರ್ಥಿ ಯಾರು ಎಂದು ಚರ್ಚೆ ಆದಾಗ ಈಶ್ವರಪ್ಪನವರೇ ಡಾ. ಸರ್ಜಿ ಅವರನ್ನು ಸೂಚಿಸಿದ್ದು ಡಾ. ಧನಂಜಯ ಸರ್ಜಿ ಸಜ್ಜನರಾಗಿದ್ದು ಅವರಿಗೆ ಅವಕಾಶ ಕೊಡಬೇಕು ಎಂದು ಅಭಿಪ್ರಾಯ ಹೇಳಿದ್ದ ಈಶ್ವರಪ್ಪ ಹಿಂದೆ ಹೇಳಿದ್ದನ್ನು ಮರೆತಿದ್ದಾರೆ ಎಂದು ಭಾವಿಸುತ್ತೇನೆ ಎಂದರು.
ಭಾರತೀಯ ಜನತಾ ಪಕ್ಷ ಒಟ್ಟಾಗಿ ಶ್ರಮ ಹಾಕುತ್ತಿದೆ ಅಭ್ಯರ್ಥಿಗಳನ್ನ ಗೆಲ್ಲಿಸುತ್ತದೆ ಎಂದ ವಿಜಯೇಂದ್ರ, ಜೂ.4 ಲೋಕಸಭಾ ಚುನಾವಣೆ ಫಲಿತಾಂಶವಾಗಿದ್ದು, ಕಳೆದ ಬಾರಿಯಷ್ಟೇ ಅಥವಾ ಒಂದು ಸ್ಥಾನ ಹೆಚ್ಚು ಗೆಲ್ಲುತ್ತೇವೆ ಎಂಬ ನನ್ನ ಮಾತು ಉತ್ಪ್ರೇಕ್ಷೆ ಅನಿಸ ಬಹುದು. ನಾನು ಭವಿಷ್ಯ ನುಡಿಯುತ್ತಿದ್ದೇನೆ ಎಂದು ಭಾವಿಸಬೇಡಿ ಎಂದು ಹೇಳಿದರು.
ತಮ್ಮ ಗ್ಯಾರಂಟಿ ಯೋಜನೆ ಕೈ ಹಿಡಿಯಲಿದೆ ಎಂದು ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿಗಳು ಭ್ರಮೆಯಲ್ಲಿದ್ದಾರೆ. ಮುಂದೆ ಕಾಂಗ್ರೆಸ್ಸಿನವರಿಗೆ ದೊಡ್ಡ ನಿರಾಶೆ ಕಾದಿದೆ. ಬಿಜೆಪಿ ಅತಿ ಹೆಚ್ಚು ಸ್ಥಾನ ಗೆದ್ದು ಇತಿಹಾಸ ಸೃಷ್ಟಿ ಮಾಡುತ್ತೇವೆ. ಪ್ರಜ್ಞಾವಂತ ಮತದಾರರು ಪ್ರಧಾನಿ ನರೇಂದ್ರ ಮೋದಿ ಕೈ ಹಿಡಿದು ಮತ್ತೆ ಪ್ರಧಾನಿಯಾಗಲು ಹಂಬಲಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ವಿಧಾನ ಪರಿಷತ್ ಗೆ ಸುಮಲತಾ, ರವಿ ಕುಮಾರ್ ಹೆಸರು ಪ್ರಸ್ತಾಪದ ಬಗ್ಗೆ ಮಾತನಾಡಿದ ಅವರು, ಮಾಧ್ಯಮದ ಮುಖಾಂತರ ಗಮನಕ್ಕೆ ಬಂದಿದೆ. ಅಂತಿಮ ಹೆಸರುಗಳು ಶೀಘ್ರ ತೀರ್ಮಾನ ಆಗುತ್ತದೆ. ಇವತ್ತು ಅಂತಿಮವಾಗಿ ಘೋಷಣೆ ಆಗಬಹುದು. ನಾನು ಕೂಡ ನಿರೀಕ್ಷೆಯಲ್ಲಿದ್ದೇನೆ. ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಾತನಾಡಿದ್ದೇನೆ. ಹಲವಾರು ಹೆಸರುಗಳು ಪ್ರಸ್ತಾಪ ಆಗಿದ್ದು ಅಂತಿಮವಾಗಿ ಇವತ್ತು ನಿರ್ಧಾರ ಮಾಡಿ ಘೋಷಣೆ ಮಾಡುತ್ತಾರೆ ಎಂದರು.
ರಾಹುಲ್ ಗಾಂಧಿ ಒಂದು ಲಕ್ಷ ರೂಪಾಯಿ ಘೋಷಣೆ ವಿಚಾರ, ಜನರನ್ನ ಮೂರ್ಖ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಹೆಚ್ಚು ದಿನ ಈ ಆಟಗಳು ನಡೆಯುವುದಿಲ್ಲ. ರಾಹುಲ್ ಗಾಂಧಿ ವ್ಯಕ್ತಿತ್ವ, ನಾಯಕತ್ವ ವನ್ನು ರಾಜ್ಯ ಮತ್ತು ದೇಶದ ಜನ ನೋಡಿದ್ದಾರೆ. ಯಾವುದೇ ಬೂಟಾಟಿಕೆ, ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ ಎಂದರು.
ರಾಜ್ಯದ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಕೇರಳದಲ್ಲಿ ಮಹಾಯಾಗ ನಡೆಸುತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಬಿ.ವೈ ವಿಜಯೇಂದ್ರ ನಕಾರ ವ್ಯಕ್ತಪಡಿಸಿದರು.