ಉಡುಪಿ: ಯಕ್ಷಗಾನ ಕಲಾವಿದರ ವಾರ್ಷಿಕ ಸಮಾವೇಶ
ಉಡುಪಿ: ಯಕ್ಷಗಾನ, ಕಲೆಯ ಎಲ್ಲಾ ಅಂಗಗಳನ್ನು ಹೊಂದಿರುವ ಪರಿಪೂರ್ಣ ಕಲಾ ಪ್ರಕಾರ. ಅದನ್ನು ಪ್ರಸ್ತುತ ಪಡಿಸುವ ಕಲಾವಿದರು ಸಮಾಜಕ್ಕೆ ಪುರಾಣದ ಸಂದೇಶವನ್ನು ತಿಳಿಸುವ ಶ್ರೇಷ್ಠ ವಿದ್ವಾಂಸರು. ಯಕ್ಷಗಾನ ಕಲಾರಂಗ ಮಾಡುತ್ತಿರುವ ಸಮಾಜಮುಖಿ ಕೆಲಸ ಅನನ್ಯ ಮತ್ತು ಅಗಾಧ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಹೇಳಿದ್ದಾರೆ.
ಮೇ 31ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗ ಆಯೋಜಿಸಿದ 25ನೇ ವರ್ಷದ ಯಕ್ಷಗಾನ ಕಲಾವಿದರ ಸಮಾವೇಶದಲ್ಲಿ ಅನುಗ್ರಹ ಸಂದೇಶ ನೀಡಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರೂ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಯೋಜಿತ ಅಧ್ಯಕ್ಷರಾಗಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಸ್ವಾಮೀಜಿ ಸ್ಮರಣಿಕೆ, ಶಾಲು, ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ಕಲಾವಿದರಾದ ಸುಬ್ರಹ್ಮಣ್ಯ ಬೈಪಾಡಿತ್ತಾಯರು ಬರೆದ ‘ಆಗಸದ ಬೆಳಕು’ ಪುಸ್ತಕವನ್ನು ಅವರು ಲೋಕಾರ್ಪಣೆಗೊಳಿಸಿ ದರು. ಇತ್ತೀಚೆಗೆ ನಿಧನರಾದ ಪುತ್ತೂರು ಗಂಗಾಧರ ಜೋಗಿ ಅವರ ಧರ್ಮಪತ್ನಿಗೆ ಸಾಂತ್ವನ ನಿಧಿಯನ್ನು ನೀಡಲಾಯಿತು. ಅಲ್ಲದೇ 21 ಮಂದಿ ಯಕ್ಷಗಾನ ಕಲಾವಿದರಿಗೆ ತಲಾ ಹತ್ತು ಸಾವಿರದಂತೆ ಗೃಹ ನಿರ್ಮಾಣದ ಉಡುಗೊರೆ ಹಾಗೂ 7 ಮಂದಿ ಕಲಾವಿದರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು.
ಇದರೊಂದಿಗೆ ವೃತ್ತಿಮೇಳದ ಕಲಾವಿದರಿಗೆ ತಮ್ಮ ಹೋಟೆಲ್‌ನಲ್ಲಿ ಉಚಿತ ಉಪಹಾರ ನೀಡಿ ಪ್ರೋತ್ಸಾಹಿಸುತ್ತಾ ಬಂದಿರುವ ಆಗುಂಬೆಯ ಗುರುರಾಜ ಅಡಿಗ ಮತ್ತು ಕೊಕ್ಕರ್ಣೆಯ ಕೆ. ಎಸ್. ಶ್ರೀನಿವಾಸ ನಾಯಕ್ ರನ್ನು ಗೌರವಿಸಿದರು.
ವೇದಿಕೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ, ಆನಂದ ಸಿ. ಕುಂದರ್, ಪಿ.ಪುರುಷೋತ್ತಮ ಶೆಟ್ಟಿ, ಬೆಳ್ವೆ ಗಣೇಶ್ ಕಿಣಿ, ಸುರೇಶ್ ನಾಯಕ್ ಕುಯಿಲಾಡಿ, ಸಿಎ ಗಣೇಶ್ ಕಾಂಚನ್, ಹರಿಯಪ್ಪ ಕೋಟ್ಯಾನ್ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್.ಎನ್. ಶೃಂಗೇಶ್ವರ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನೆ: ಬೆಳಗ್ಗೆ ಶ್ರೀಮಠದ ದಿವಾನರಾದ ನಾಗರಾಜ ಅಚಾರ್ಯ ಸಮಾವೇಶವನ್ನು ಉದ್ಘಾಟಿಸಿದರು. ಬಳಿಕ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರಿಂದ ಕರಾವಳಿಯ ಯಕ್ಷಗಾನ ಕಲಾವಿದರಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ನಡೆಯಿತು.
ಸಮಾರಂಭದಲ್ಲಿ ಕಲ್ಲೇಶ್ವರ ಸ್ವಾಮಿ ಯಕ್ಷಗಾನ ಮಂಡಳಿ ತಿಪಟೂರು ಇವರಿಂದ ಮೂಡಲಪಾಯ ಯಕ್ಷಗಾನ ‘ದಕ್ಷಯಜ್ಞ’ ಪ್ರದರ್ಶನಗೊಂಡಿತು. ಅಪರಾಹ್ನ ಯೂಟ್ಯೂಬ್ ದಾಖಲೀಕರಣ/ ನೇರ ಪ್ರಸಾರ ಪೂರಕವೇ? ಮಾರಕವೇ? ಎಂಬ ವಿಷಯದ ಕುರಿತು 12 ಮಂದಿ ಕಲಾವಿದರು ತಮ್ಮ ಅನುಭವ, ಅಭಿಪ್ರಾಯಗಳನ್ನು ಹಂಚಿಕೊಂಡರು.ಡಾ.ಪ್ರದೀಪ್ ಸಾಮಗ ಈ ಗೋಷ್ಠಿಯ ಸಮನ್ವಯಕಾರರಾಗಿದ್ದರು.
ಸಮಾವೇಶದಲ್ಲಿ ಕರಾವಳಿಯ ಮೂರು ಜಿಲ್ಲೆಗಳ ಯಕ್ಷಗಾನ ವೃತ್ತಿ ಮೇಳದ ಸುಮಾರು 700 ಕಲಾವಿದರು ಭಾಗವಹಿ ಸಿದ್ದು, ಅವರಿಗೆ ಉಡುಗೊರೆ, ಸಂಸ್ಥೆಯ ಸುವರ್ಣ ವರ್ಷ ಹಾಗೂ ಯಕ್ಷನಿಧಿಯ ರಜತ ವರ್ಷದ ನೆನಪಿನ ಕಾಣಿಕೆಗಳನ್ನು ನೀಡಲಾಯಿತು.