ಲೈಂಗಿಕ ಕಿರುಕುಳ ಪ್ರಕರಣ- ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸಿದ ಎಸ್ಐಟಿ

Oplus_131072

ಬೆಂಗಳೂರು: ಅಶ್ಲೀಲ ವಿಡಿಯೋ ಬಹಿರಂಗ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಿದ್ದ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಇಂದು ಜರ್ಮನಿಯ ಮ್ಯೂನಿಕ್ ನಿಂದ ಬೆಂಗಳೂರಿಗೆ ಆಗಮಿಸಿದ್ದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.

ದೇಶ ಬಿಟ್ಟು ಪರಾರಿಯಾದ ಒಂದು ತಿಂಗಳ ಬಳಿಕ ಪ್ರತ್ಯಕ್ಷವಾಗಿದ್ದ ಪ್ರಜ್ವಲ್ ರೇವಣ್ಣ ವಿಡಿಯೋ ಮಾಡಿ ತಾನು ಮೇ 31ರಂದು ಬೆಂಗಳೂರಿಗೆ ಆಗಮಿಸುವುದಾಗಿ ಹೇಳಿದ್ದರು. ಅಲ್ಲದೆ ಲುಫ್ತಾನ್ಸ ವಿಮಾನದಲ್ಲಿ 30ನೇ ತಾರೀಕಿನಂದು ವಿಮಾನ ಬುಕ್ ಸಹ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಅಲರ್ಟ್ ಆಗಿದ್ದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿದ್ದರು.

ಇದೀಗ ಲುಫ್ತಾನ್ಸ ಎಲ್ಎಚ್ 764 ವಿಮಾನದಲ್ಲಿ ಬೆಂಗಳೂರಿಗೆ ಪ್ರಜ್ವಲ್ ರೇವಣ್ಣ ಆಗಮಿಸಿದ್ದಾರೆ. ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ಹಾಗೂ ಲುಕ್ ಔಟ್ ನೋಟಿಸ್ ಸಹ ಹೊರಡಿಸಲಾಗಿದೆ. ಹೀಗಾಗಿ ಮೊದಲಿಗೆ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆಯಲಿದ್ದಾರೆ. ನಂತರ ಕೆಲ ಡ್ರಾಫ್ಟ್ ಗಳನ್ನು ರಚಿಸಿ ಅದಕ್ಕೆ ಇಮಿಗ್ರೇಷನ್ ಅಧಿಕಾರಿಗಳು ಸಹಿ ಪಡೆಯಲಿದ್ದಾರೆ. ಈ ಬಗ್ಗೆ ಲೋಕಸಭೆ ಸ್ಪೀಕರ್ ಗೆ ಇಮಿಗ್ರೇಷನ್ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ.

ರಾಜ್ಯದಲ್ಲಿ ಏಪ್ರಿಲ್ 26ರಂದು ನಡೆದ ಮೊದಲ ಹಂತದ ಲೋಕಸಭೆ ಚುನಾವಣೆ ಮತದಾನ ಬಳಿಕ ಏಪ್ರಿಲ್ 27ರಂದು ಪ್ರಜ್ವಲ್ ರೇವಣ್ಣ ತಮ್ಮ ರಾಜತಾಂತ್ರಿಕ ಪಾಸ್ ಪೋರ್ಟ್ ಬಳಸಿ ಜರ್ಮನಿಗೆ ತೆರಳಿದ್ದರು. ಇದೀಗ ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆದಿರುವ ಎಸ್ಐಟಿ ಪೊಲೀಸರು ಎಸ್ಐಟಿ ಕಚೇರಿಗೆ ಕರೆತರುತ್ತಿದ್ದಾರೆ.

ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ಅಧಿಕಾರಿಗಳು ಇಂದು ಬೆಳಗ್ಗೆ ಆರೋಗ್ಯ ತಪಾಸಣೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ತಮ್ಮ ವಶಕ್ಕೆ ಕೇಳಲಿದ್ದಾರೆ. ಸದ್ಯ ಎಸ್ಐಟಿ ಕಚೇರಿ ಬಳಿ ಬಿಗಿ ಭದ್ರತೆ ಒದಗಿಸಲಾಗಿದೆ. ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಬೆಂಗಳೂರು:  ಅಶ್ಲೀಲ ವಿಡಿಯೋ ಬಹಿರಂಗ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಿದ್ದ ಪ್ರಜ್ವಲ್ ರೇವಣ್ಣ ಶುಕ್ರವಾರ ನಸುಕಿನ 1.10 ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್‌ಐಟಿಯಿಂದ ಬಂಧನಕ್ಕೊಳಗಾದ 33 ವರ್ಷದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಮಹಿಳಾ ತಂಡವು ಪೊಲೀಸ್ ಜೀಪ್‌ನಲ್ಲಿ ಮಧ್ಯರಾತ್ರಿ 2.02ರ ಸುಮಾರಿಗೆ ಎಸ್‌ಐಟಿ ಕಚೇರಿಗೆ ಕರೆತಂದಿತು. ಇದೀಗ ಎಸ್‌ಐಟಿ ಕಚೇರಿಯಲ್ಲಿ ಪ್ರಜ್ವಲ್ ರಾತ್ರಿ ಕಳೆದಿದ್ದಾರೆ.

ಪ್ರಜ್ವಲ್ ಅವರನ್ನು ಶುಕ್ರವಾರ ಬೆಳಗ್ಗೆ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಲಿದೆ.

ಇಂದು ಬೆಳಗ್ಗೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅತ್ಯಾಚಾರ ಘಟನೆಗಳು ನಡೆದಿವೆ ಎಂದು ಹೇಳಲಾದ ಪ್ರಜ್ವಲ್ ರೇವಣ್ಣ ಅವರ ವಸತಿ ಗೃಹ ಮತ್ತು ಹೊಳೆನರಸೀಪುರದ ಫಾರ್ಮ್‌ ಹೌಸ್‌ಗಳಿಗೆ ಸ್ಥಳ ಮಹಜರಿಗಾಗಿ ಅವರನ್ನು ಕರೆದೊಯ್ಯಬೇಕಾಗಿರುವುದರಿಂದ ಎಸ್‌ಐಟಿ ಅವರನ್ನು ಕಸ್ಟಡಿಗೆ ಕೇಳಲಿದೆ. ಬಳಿಕ ಎಸ್‌ಐಟಿ ಅಧಿಕಾರಿಗಳು ವಿವರವಾದ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕಿದೆ.

Leave a Reply

Your email address will not be published. Required fields are marked *

error: Content is protected !!