ನೈರುತ್ಯ ಪದವೀಧರರ ಚುನಾವಣೆ: ರಾಜ್ಯ ಅತಿಥಿ ಉಪನ್ಯಾಸಕರ ಸಂಘದಿಂದ ಎಸ್.ಪಿ. ದಿನೇಶ್‌ಗೆ ಬೆಂಬಲ
ಉಡುಪಿ: ಜೂ.3ರಂದು ವಿಧಾನಪರಿಷತ್‌ಗೆ ನಡೆಯುವ ನೈರುತ್ಯ ಪದವೀಧರ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಪಿ. ದಿನೇಶ್ ಅವರಿಗೆ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಡಾ.ಹನುಮಂತ ಗೌಡ ಆರ್.ಕಲ್ಮನಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘದ ಕಾನೂನು ಸಲಹೆಗಾರರೂ ಆಗಿರುವ ಎಸ್.ಪಿ.ದಿನೇಶ್ ಅವರು ನಮ್ಮ ಹೋರಾಟಗಳಿಗೆ, ಸೇವಾ ಭದ್ರತೆಗೆ ಹಾಗೂ ನಮ್ಮೆಲ್ಲಾ ಬೇಡಿಕೆಗಳಿಗೆ ಸಂಘಟನಾತ್ಮಕ ವಾಗಿ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ. ಹೀಗಾಗಿ ಅವರನ್ನು ಬೆಂಬಲಿಸುವುದು ನಮ್ಮ ಕರ್ತವ್ಯವೂ ಆಗಿದೆ ಎಂದರು.
ನಮ್ಮ ಅತಿಥಿ ಉಪನ್ಯಾಸಕರ ಬೀದಿ ಹೋರಾಟ, ಪಾದಯಾತ್ರೆಗಳ ಸಂದರ್ಭದಲ್ಲಿ ಎಂದೂ ಕಾಣಿಸಿಕೊಳ್ಳದವರು ಚುನಾವಣೆಗಳು ಬಂದಾಗ ಅತಿಥಿ ಉಪನ್ಯಾಸಕರ ಹೆಸರು ಬಳಕೆ ಮಾಡಿಕೊಳ್ಳುತ್ತಿರುವುದು ಖೇಧಕರ ಎಂದು ಹೇಳಿದ ಅವರು, ನಮ್ಮ ಸಂಕಷ್ಟದ ಸಂದರ್ಭದಲ್ಲಿ ಜೊತೆಗಿದ್ದೆವು ಎಂದು ಹೇಳಿಕೆ ನೀಡುತ್ತಿರುವುದು ಬರೀ ಬೊಗಳೆ ಎಂದರು.
ಕೊರೋನಾ ಕಾಲದಲ್ಲಿ ಸರಕಾರವು ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡಿರುವುದು ನಮ್ಮ ಸಂಘದ ಹೋರಾಟದ ಫಲವೇ ಹೊರತು ಯಾರದೇ ಸಹಕಾರದಿಂದಲ್ಲ. ಅದೇ ರೀತಿ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ನಮ್ಮ ಸಂಘದ ಹೋರಾಟ ಕಾರಣವೇ ಹೊರತು ಬೇರೆ ಯಾರೂ ಅಲ್ಲ ಎಂದು ಹನುಮಂತ ಗೌಡ ನುಡಿದರು.
ಏನೇ ಇದ್ದರೂ ಈ ಬಾರಿಯ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಯಲ್ಲಿ ರಾಜ್ಯ ಸರಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಸಂಪೂರ್ಣ ಬೆಂಬಲ ಎಸ್.ಪಿ.ದಿನೇಶ್ ಹಾಗೂ ಶಿಕ್ಷಕರ ಕ್ಷೇತ್ರದ ಹರೀಶ್ ಆಚಾರ್ಯ ಅವರಿಗೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಚಂದ್ರಶೇಖರ ಕಾಳನ್ನವರ, ಕೋಶಾಧಿಕಾರಿ ಪ್ರೊ.ಕೃಷ್ಣಾ ರೆಡ್ಡಿ, ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷೆ ಡಾ.ಶಹಿದಾ ಜಹಾನ್, ಕಾರ್ಯದರ್ಶಿ ಸಂತೋಷ್, ಮಂಗಳೂರು ಜಿಲ್ಲಾಧ್ಯಕ್ಷ ಮನಮೋಹನ್, ಮಾಧವ ಅವರು ಉಪಸ್ಥಿತರಿದ್ದರು.