ಕಾಪು: ಪುರಸಭೆ ಅಧ್ಯಕ್ಷಗಾದಿ ಬಿಜೆಪಿಗೆ, ಉಪಾಧ್ಯಕ್ಷರಾಗಿ ಕಾಂಗ್ರೆಸ್
ಕಾಪು: ತೀವ್ರ ಕುತೂಹಲ ಮೂಡಿಸಿದ ಕಾಪು ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಇಂದು ತೆರೆ ಬಿದ್ದಿದೆ. ಬಿಜೆಪಿಯ ಅನಿಲ್ ಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಕಾಂಗ್ರೆಸ್ ಸ್ಥಾನವು ಮೀಸಲಾತಿಯಿಂದಾಗಿ ಬಿಜೆಪಿ ಕೈತಪ್ಪಿದೆ. ಪುರಸಭೆಯಲ್ಲಿ ಪ್ರಥಮ ಬಾರಿಗೆ ಕಮಲ ಅರಳಿದೆ.
ಚುನಾವಣೆಯಲ್ಲಿ 13 – 11 ಮತಗಳೊಂದಿಗೆ ಅಧ್ಯಕ್ಷರ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು. 23 ಸದಸ್ಯ ಬಲದ ಕಾಪು ಪುರಸಭೆಯಲ್ಲಿ ಕಾಂಗ್ರೆಸ್ 12, ಬಿಜೆಪಿಯ 11 ಮಂದಿ ಸದಸ್ಯರಿದ್ದಾರೆ. ಸಂಸದರು ಮತ್ತು ಶಾಸಕರ ಮತ ಸೇರಿ ಬಿಜೆಪಿಗೆ ಬಹುಮತ ಲಭಿಸಿದೆ.
ಹಿಂದುಳಿದ ವರ್ಗ “ಎ” ಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಅನಿಲ್ ಕುಮಾರ್, ಕಾಂಗ್ರೆಸ್ ನಿಂದ ಶಾಬು ಸಾಹೇಬ್ ಸ್ಪರ್ಧೆ ನಡೆಸಿದ್ದರು. ಹಿಂದಿನ ಅವಧಿಯಲ್ಲಿ ಕಾಪು ಗ್ರಾಮ ಪಂಚಾಯತ್ ನ ಸದಸ್ಯರಾಗಿದ್ದ ಅನಿಲ್ ಕುಮಾರ್ 13 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.