ಉಡುಪಿ ಗ್ಯಾಂಗ್‌ವಾರ್: ಆರೋಪಿ ಗಾಯಾಳುವಿಗೆ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ಪ್ರಕರಣ ದಾಖಲು
ಉಡುಪಿ, ಮೇ 29: ಉಡುಪಿಯ ಗ್ಯಾಂಗ್‌ವಾರ್ ಪ್ರಕರಣದ ಗಾಯಾಳು ಶರೀಫ್‌ಗೆ ಚಿಕಿತ್ಸೆ ನೀಡಿದ ಆರೋಪದಲ್ಲಿ ವೈದ್ಯರೊಬ್ಬರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 18ರಂದು ನಸುಕಿನ ವೇಳೆ ನಡೆದ ಗ್ಯಾಂಗ್ ವಾರ್‌ನಲ್ಲಿ ಕಾರು ಢಿಕ್ಕಿ ಹೊಡೆದು ರಸ್ತೆಗೆ ಬಿದ್ದ ಶರೀಫ್‌ನ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ದಾಳಿ ನಡೆಸಿದ್ದರು. ಇದರಿಂದ ಶರೀಫ್‌ನ ಎಡಕಾಲು, ಬಲ ಕಿವಿ ಹಿಂಬದಿ, ಬಲಕೈಗೆ ಗಾಯವಾಗಿತ್ತು.
ನಂತರ ಶರೀಫ್‌ನನ್ನು ಇತರೆ ಆರೋಪಿಗಳಾದ ಅಲ್ಫಾಝ್, ಮಜೀದ್ ಚಿಕಿತ್ಸೆಗಾಗಿ ಪಡುಬಿದ್ರಿಯ ಸಿದ್ದಿ ವಿನಾಯಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿನ ಆಸ್ಪತ್ರೆಯ ವೈದ್ಯ ಡಾ.ಜಾರ್ಜ್ ಸಾಜಿ ಎಂಬವರು ಆರೋಪಿಯನ್ನು ದಾಖಲು ಮಾಡಿಕೊಂಡು ಚಿಕಿತ್ಸೆಯನ್ನು ನೀಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಪ್ರಕರಣವು ಕಾನೂನು ಕ್ರಮಕ್ಕೆ ಒಳಪಡುತ್ತದೆ ಎಂದು ತಿಳಿದಿದ್ದರೂ ಕೂಡ ಉದ್ದೇಶಪೂರ್ವಕವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡದೇ ಕರ್ತವ್ಯ ಲೋಪ ಎಸಗಿದ ಡಾ.ಜಾರ್ಜ್ ಸಾಜಿ ವಿರುದ್ಧ ನ್ಯಾಯಾಲಯದ ಅನುಮತಿಯನ್ನು ಪಡೆದು ಉಡುಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.