ಉನ್ನತ ಶಿಕ್ಷಣದಲ್ಲಿ ತುಳು ಭಾಷಾ ಮೀಸಲು ಉಳಿಸಲು ಪ್ರಯತ್ನಿಸೋಣ: ಇಂದ್ರಾಳಿ ಜಯಕರ ಶೆಟ್ಟಿ
ಉಡುಪಿ, ಮೇ 29: ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣದಲ್ಲಿ ತುಳು ಭಾಷಾ ಕೋಟಾ (ಮೀಸಲು) ಉಳಿಸಲು ರಾಜಕೀಯ ಒತ್ತಡ ಹೇರಬೇಕಿದ್ದು ಇದಕ್ಕಾಗಿ ಪ್ರಯತ್ನ ಮಾಡಬೇಕಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಭಿಪ್ರಾಯ ಪಟ್ಟಿದ್ದಾರೆ.
ಉಡುಪಿಯ ಎಂಜಿಎಂ ಕಾಲೇಜಿನ ತುಳು ಸಂಘ, ಉಡುಪಿ ತುಳುಕೂಟದ ಸಹಯೋಗದಲ್ಲಿ ತುಳು ಸಂಸ್ಕೃತಿ ಹಬ್ಬ, ಸಾಂಪ್ರದಾಯಿಕ ದಿನದಂಗವಾಗಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ ‘ತುಳು ಐಸಿರಿ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಕರಾವಳಿಯ 4 ಉನ್ನತ ಶಿಕ್ಷಣ ವಿದ್ಯಾ ಸಂಸ್ಥೆಗಳಲ್ಲಿದ್ದ ತುಳು ಕೋಟಾ ಅವಕಾಶ ಅವು ‘ಡೀಮ್ಡ್ ವಿವಿ’ಯಾಗಿ ಪರಿವರ್ತನೆಗೊಂಡ ಹಿನ್ನೆಲೆಯಲ್ಲಿ ವಿರಳವಾಗುತ್ತಿದ್ದು ಮುಂದೊಂದು ದಿನ ತುಳುವರಿಗೆ ಮೀಸಲು ಇಲ್ಲದಂತಾಗುವ ಅಪಾಯ ಎದುರಾಗಬಹುದು. ಈ ನಿಟ್ಟಿನಲ್ಲಿ ಅಧಿಕಾರಿಗಳು, ರಾಜಕೀಯ ಪ್ರಮುಖರು ಹಾಗೂ ಸರಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ ಎಂದರು.
ಮಾರಾಟದಲ್ಲಿ ಸಿಗುವ ವಸ್ತುಗಳಲ್ಲದ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು, ತುಳುನಾಡ ಮಣ್ಣ ಭಾಷೆಯ ಋಣ ತೀರಿಸಲು ತುಳು ಮಾತೃ ಭಾಷಿಗರು ಮನೆಯಲ್ಲಿ ತುಳುವನ್ನೇ ಮಾತನಾಡ ಬೇಕು. ತುಳುವಿನ ಜತೆಗೆ ಅನ್ಯಭಾಷೆಯನ್ನೂ ಕಲಿಯಬೇಕು ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಹಾಗೂ ನಟ ಕಾಸರಗೋಡು ಚಿನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುಳುನಾಡಿನ ಮನೆ, ಮನಗಳಲ್ಲಿ ತುಳು ಅಭಿಯಾನದ ಕಿಡಿ ಹಚ್ಚಬೇಕು. ಭಾಷೆ ಎಲ್ಲರೂ ಕಲಿಯುವಂತಾಗಬೇಕು. ಸಾಂಸ್ಕೃತಿಕವಾಗಿ ಶ್ರೀಮಂತವಾಗಬೇಕು. ತುಳು ಲಿಪಿಯ ಪ್ರದರ್ಶನ ಅದರ ಕಲಿಕೆಗೆ ಪ್ರೇರಣೆಯಾಗಬೇಕಿದೆ. ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಲಿಖಿತ ಸಾಹಿತ್ಯ ರಚನೆ ಹೆಚ್ಚೆಚ್ಚು ಆಗಬೇಕು ಎಂದು ಹೇಳಿದರು.
ಎಂಜಿಎಂ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಟಿ. ಮೋಹನ್‌ದಾಸ್ ಪೈ ಸ್ಮಾರಕ ಕೌಶಲ್ಯ ಕೇಂದ್ರದ ನಿರ್ದೇಶಕ ಟಿ.ರಂಗ ಪೈ, ಎಂಜಿಎಂ ಪ.ಪೂ. ಕಾಲೇಜಿನ ಪ್ರಿನ್ಸಿಪಾಲ್ ಮಾಲತಿದೇವಿ, ತುಳು ಸಂಘದ ಕಾರ್ಯದರ್ಶಿ ಸಾಕ್ಷಿ ಉಪಸ್ಥಿತರಿದ್ದರು.
ಅನನ್ಯಾ ಶಿವತ್ತಾಯ ತುಳುಗೀತೆ ಹಾಡಿದರು. ತುಳು ಸಂಘದ ಸಂಚಾಲಕ ಡಾ. ಪುತ್ತಿ ವಸಂತ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.