ರಘುಪತಿ ಭಟ್ ಪರ ಹಲವರು ಹಿಂಬಾಗಿಲಿನಿಂದ ಕೆಲಸ ಮಾಡುತ್ತಿದ್ದಾರೆ- ಕೆ.ಎಸ್ .ಈಶ್ವರಪ್ಪ
ಉಡುಪಿ: ಬಿಜೆಪಿಯಲ್ಲಿ ದೇಶಕ್ಕೊಂದು, ರಾಜ್ಯಕ್ಕೊಂದು ವ್ಯತಿರಿಕ್ತ ಸಿದ್ಧಾಂತ ಇದೆ. ಹಿಂದುತ್ವದ ಸಿದ್ಧಾಂತದಲ್ಲಿ ಕೆಲಸ ಮಾಡುವ ಬಿಜೆಪಿ, ರಾಜ್ಯದಲ್ಲಿ ಹಿಂದುತ್ವದ ವಿಚಾರಕ್ಕೆ ತಿಲಾಂಜಲಿ ಬಿಡಲಾಗುತ್ತಿದೆ. ಪಕ್ಷನಿಷ್ಠೆಗೆ ಬೆಲೆಯಿಲ್ಲ. ಅಪ್ಪಮಕ್ಕಳ ಕೈಗೆ ಬಿಜೆಪಿ ಸಿಕ್ಕಿಬಿಟ್ಟಿದೆ. ರಾಷ್ಟ್ರೀಯವಾದದಿಂದ ಲಿಂಗಾಯತ ಜಾತೀಯವಾದದ ಕಡೆ ತಿರುಗುತ್ತಿದೆ. ಯಡಿಯೂರಪ್ಪ, ವಿಜಯೇಂದ್ರರ ಹಿಂದೆ ಸುತ್ತೋರಿಗೆ ನೆಲೆ ಸಿಗುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ರಘುಪತಿ ಭಟ್ ಗೆ ಬೆಂಬಲವಾಗಿ ಉಡುಪಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದರು.
ಜನಸಂಘ, ಆರ್ ಎಸ್ ಎಸ್ ತಪಸ್ಸು ಒಂದು ಕುಟುಂಬಕ್ಕೆ ಬಲಿಯಾಗಿದ್ದು, ಪರಿಷತ್ ಚುನಾಚಣೆಯನ್ನು ರಘುಪತಿ ಭಟ್ ಗೆಲ್ಲುತ್ತಾರೆ. ಇದರಲ್ಲಿ ಅನುಮಾನ ಇಲ್ಲ. ರಘುಪತಿ ಭಟ್ ಗೆ ಹಿಂಬಾಗಿಲಿನಿಂದ ಹಲವರು ಕೆಲಸ ಮಾಡುತ್ತಿದ್ದಾರೆ. ಕುಟುಂಬದ ಕೈಗೆ ಪಕ್ಷವನ್ನು ಬಲಿಕೊಡಬೇಕಾ? ಕಾರ್ಯಕರ್ತರು ಚಿಂತಿಸಿಬೇಕು ಎಂದು ಕರೆ ನೀಡಿದರು.
30 ವರ್ಷದಿಂದ ಬಿಜೆಪಿಗೆ ನಿಷ್ಠರಾಗಿದ್ದವರನ್ನು ಪಕ್ಕಕ್ಕೆ ಸರಿಸಿ, ನಕ್ಸಲಿಸ್ಟ್, ಹಿಂದು ವಿರೋಧಿ ಮುಸಲ್ಮಾನ ಕ್ರೈಸ್ತ ರ ನಡಿಗೆಯ ನೇತೃತ್ವ ವಹಿಸಿದವನಿಗೆ ಟಿಕೆಟ್ ಕೊಡಲಾಗಿದೆ. ಜಾತಿ, ಹಣದ ಬಲದಿಂದ ಹಿಂದುತ್ವ ವಿರೋಧಿ ಧನಂಜಯ ಸರ್ಜಿಗೆ ಬಿಜೆಪಿ ಟಿಕೆಟ್ ಕೊಡಲಾಗಿದೆ. ನೊಂದ ನಾಯಕರು, ಲಕ್ಷಾಂತರ ಕಾರ್ಯಕರ್ತರು ಬಿಜೆಪಿ ಶುದ್ಧೀಕರಣ ಆಗಬೇಕು ಎಂದಿದ್ದಾರೆ.
ಬಿಜೆಪಿ ಕರ್ನಾಟಕ ಸರ್ವಾಧಿಕಾರಿ ವ್ಯವಸ್ಥೆಗೆ ಒಳಪಟ್ಟಿರೋದು ನೋವು ತಂದಿದೆ. ಮಗನಿಗೆ ಉಪಯೋಗ ಆಗಲಿ ಅಂತ ಸಾದರ ಲಿಂಗಾಯತ ಡಾ. ಸರ್ಜಿಗೆ ಟಿಕಟ್ ಕೊಡಲಾಗಿದ್ದು, ಕೇಂದ್ರದಲ್ಲಿ ಇರುವವರಿಗೆ ಕರ್ನಾಟಕದಲ್ಲಿ ಯಡಿಯೂರಪ್ಪ ಮಾತ್ರ ಎಂಬ ಭ್ರಮೆಯಲ್ಲಿದ್ದಾರೆ. ಲಿಂಗಾಯತ ಜಾತಿ ಮತ್ತು ಯಡಿಯೂರಪ್ಪ ಎಂಬೂದು ಭ್ರಮೆಯಾಗಿದೆ. ವಿಜಯೇಂದ್ರ ಒಬ್ಬ ಬಚ್ಚಾ ಅವನಿಗೆ ಯಾವ ರಾಜಕೀಯ ಜ್ಞಾನ ಇದೆ..? ಆರು ತಿಂಗಳಲ್ಲಿ ಅಧ್ಯಕ್ಷನಾಗಲು ಬೇರೆ ನಾಯಕರು ಸಿಗಲಿಲ್ವೇ? ಎಂದು ಪ್ರಶ್ನಿಸಿದರು.
ಅಪ್ಪ, ಮಕ್ಕಳು ಬಂದು ಕೃಷ್ಣನ ಮುಂದೆ ಪ್ರಮಾಣ ಮಾಡಲಿ. ಲೋಕಸಭಾ ಚುನಾವಣೆಯಲ್ಲಿ ರಘುಪತಿ ಭಟ್ ಗೆ ಶಿವಮೊಗ್ಗ ಉಸ್ತುವಾರಿ ಕೊಡಲಾಗಿತ್ತು. 42 ದಿನ ಶಿವಮೊಗ್ಗದ ಹಳ್ಳಿ ಹಳ್ಳಿಯಲ್ಲಿ ಭಟ್ರನ್ನು ಸುತ್ತಿಸಿ ಪ್ರಚಾರ ಮಾಡಿಸಿದ್ದೀರಿ. ರಘುಪತಿ ಭಟ್ ಹೆಂಡತಿ, ಮಕ್ಕಳನ್ನು ಬಿಟ್ಟು ರಾತ್ರಿಹಗಲು ಬಿಜೆಪಿಗೆ ಪ್ರಚಾರ ಮಾಡಿದರು. ನಿಮಗೇ ಪರಿಷತ್ತು ಟಿಕೆಟ್ ಎಂದು ನಂಬಿಸಿ ಕೆಲಸ ಮಾಡಿಸಿದ್ದಾರೆ ಎಂದು ದೂರಿದರು.
ನಾವು ಭಟ್ರಿಗೆ ಮಾತು ಕೊಡಲಿಲ್ಲ ಎಂದು ಕೃಷ್ಣಮಠಕ್ಕೆ ಬಂದು ಪ್ರಮಾಣ ಮಾಡಲಿ, ಜಾತಿ ಹಣಬಲದಿಂದ ಟಿಕೆಟ್ ಡಾ.ಧನಂಜಯ ಸರ್ಜಿ ಪಾಲಾಯಿತು. ಪಕ್ಷನಿಷ್ಠೆಯಲ್ಲಿ ಇವರಿಗೆ ರಘುಪತಿ ಭಟ್ ಅವರ ಎಡಗಾಲಿನಷ್ಟು ಬೆಲೆ ಇಲ್ಲ ಎಂದು ವ್ಯಂಗಿಸಿದರು.
ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ ಎಂಬ ವಿಜಯೇಂದ್ರ ಹೇಳಿಕೆ ವಿಚಾರ
ಕೇರಳ ತಮಿಳುನಾಡಿನಲ್ಲಿ ಹಲವಾರು ಬಿಜೆಪಿ ನಾಯಕರು ಒದ್ದಾಡುತ್ತಿದ್ದಾರೆ. ತಮಿಳುನಾಡಲ್ಲಿ ಅಣ್ಣಾಮಲೈ ಸಂಘಟನೆಗೆ ಬಿದ್ದು ಒದ್ದಾಡ್ತಾಯಿದ್ದಾರೆ. ಅಣ್ಣಾಮಲೈಗೆ ಯಾವಾಗ ಏನು ಕಾದಿದ್ಯೊ ಗೊತ್ತಿಲ್ಲ..? ವಿಜಯೇಂದ್ರನದ್ದು ಮುಠ್ಠಾಳತನದ ಹೇಳಿಕೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿವರಾಮ್ ಉಡುಪ, ಉಪೇಂದ್ರ ನಾಯಕ್, ಮಹೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಾಯಣ್ಣ ಬ್ರಿಗೇಡ್ ಮೂಲಕ ಹಿಂದುಳಿದ ದಲಿತರನ್ನು ಒಟ್ಟುಗೂಡಿಸಬೇಕು. ಕೂಡಲ ಸಂಗಮ ದೇವ ಸಮಾವೇಶದಿಂದ ಯಡಿಯೂರಪ್ಪ ಸಮಾಧಾನ ಆಗಿರಲಿಲ್ಲ, ಅಮಿತ್ ಶಾ ಬೇಡ ಅಂದದ್ದಕ್ಕೆ ಬರ್ಕಾಸ್ತು ಮಾಡಿದೆ. ಮತ್ತೆ ರಾಯಣ್ಣ ಬ್ರಿಗೇಡ್ ರಚನೆ ಬಗ್ಗೆ ಚರ್ಚೆ ಮಾಡುತ್ತೇವೆ. ರಾಜ್ಯದ ಎಲ್ಲಾ ಪ್ರಮುಖರು ಕೂತು ಚರ್ಚೆ ಮಾಡಿ ತಿಳಿಸುತ್ತೇವೆ.