ಮಂಗಳೂರು: ರಸ್ತೆಯಲ್ಲಿ ನಮಾಝ್ ಮಾಡಿದ ಆರೋಪ- ಸ್ವಯಂ ಪ್ರೇರಿತ ಪ್ರಕರಣ ದಾಖಲು
ಮಂಗಳೂರು, ಮೇ 28: ನಗರದ ಕಂಕನಾಡಿಯ ಮಸೀದಿಯೊಂದರ ಬಳಿಯ ರಸ್ತೆಯಲ್ಲಿ ಮೇ 24 ರಂದು ನಮಾಝ್ ಮಾಡಿದ್ದಾರೆ ಎನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಚರ್ಚೆಯಾಗುತ್ತಿರುವ ಮಧ್ಯೆಯೇ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶುಕ್ರವಾರ ನಮಾಝ್ ಮಾಡಿದ್ದಾರೆ ಎನ್ನಲಾದ ಈ ವೀಡಿಯೋ ಸೋಮವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಅಲ್ಲದೆ ಈ ಬಗ್ಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿತ್ತು. ಅದರ ಮಧ್ಯೆ ಕದ್ರಿ ಪೊಲೀಸರು ಕಲಂ 341, 283, 143 ಜತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ವೀಡಿಯೋ ಪರಿಶೀಲಿಸಲಾಗಿದ್ದು, ಸಾರ್ವಜನಿಕರಿಗೆ ಓಡಾಡಲು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆಯನ್ನುಂಟು ಮಾಡಿದ ವ್ಯಕ್ತಿಗಳ ವಿರುದ್ಧ ಸ್ವಯಂಪ್ರೇರಿತ (ಸುಮೊಟೊ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.