ಉಡುಪಿ ಶಾಸಕರೇ ತಾವು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೀರಿ ಅನ್ನೋದು ನೆನಪಿರಲಿ- ಎಸ್‌ಡಿಪಿಐ
ಉಡುಪಿ ಮೇ.28(ಉಡುಪಿ ಟೈಮ್ಸ್ ವರದಿ): ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಎಷ್ಟು ಅಕ್ರಮ ಕಟ್ಟಡಗಳಿವೆ, ಅಕ್ರಮ ಮಳಿಗೆಗಳಿವೆ ಎಂಬುದನ್ನು ಪಟ್ಟಿ ಮಾಡಿ ಕೊಡುತ್ತೇವೆ. ಇದನ್ನೇಲ್ಲಾ ಕೆಡವಲು ಒತ್ತಾಯಿಸಿ ಪ್ರತಿಭಟನೆ ನಡೆಸಲು ಯಶ್‍ಪಾಲ್ ಸುವರ್ಣ ಅವರು ತಯಾರಿದ್ದಾರೆಯೇ. ಈ ಬಗ್ಗೆ ಅವರು ಬಹಿರಂಗ ಚರ್ಚೆಗೆ ಸಿದ್ದರಿದ್ದಾರೆಯೇ ಎಂದು ಎಸ್.ಡಿ.ಪಿ.ಐ ವಕ್ತಾರ ರಿಯಾಝ್ ಕಡಂಬು ಅವರು ಸವಾಲು ಹಾಕಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಯಶ್ ಪಾಲ್ ಸುವರ್ಣ ಅವರು ಶಾಂತವಾಗಿರುವ ಉಡುಪಿಯ ಶಾಂತಿಯನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ಕೇವಲ ಝರಾ ಹೋಟೆಲ್ ಅಕ್ರಮ ಎಂದು ಹೇಳಿ ಅದನ್ನು ತೆರವುಗೊಳಿಸದೇ ಇದ್ದರೆ ಪ್ರತಿಭಟನೆ ಮಾಡುವುದಾಗಿ ಯಶ್ ಪಾಲ್ ಸುವರ್ಣ ಅವರು ಉಡುಪಿ ನಗರ ಸಭೆಗೆ ಬೆದರಿಕೆಯೊಡ್ಡಿ ಹೇಳಿಕೆಯೊಂದನ್ನು ನೀಡಿದ್ದಾರೆ. ಯಶ್‍ಪಾಲ್ ಸುವರ್ಣ ಅವರೇ ನೀವು ಈಗ ಕ್ರಿಮಿನಲ್ ಅಲ್ಲ. ನಿಮ್ಮ ಪುಡಿರೌಡಿಸಂ ತೋರಿಸುವ ಸಮಯ ಇದಲ್ಲ, ನೀವು ಈಗ ಜನಪ್ರತಿನಿಧಿ, ಒಬ್ಬ ಶಾಸಕನಾಗಿ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೀರ ಅನ್ನೋದು ನೆನಪಿರಲಿ ಎಂದರು.
ಉಡುಪಿಯಲ್ಲಿ ದೊಂಬಿ ಎಬ್ಬಿಸುವುದು, ಕಿಚ್ಚು ಹತ್ತಿಸುವುದು, ಅಶಾಂತಿ ಸೃಷ್ಟಿಸುವುದು ಬಿಜೆಪಿಯ ಶಾಸಕರಿಗೆ ಹೊಸದೇನಲ್ಲ. ಅವರಿಗೆ ಮಾಡಲು ಕೆಲಸ ಏನೂ ಇಲ್ಲದಿದ್ದಾಗ ಈ ರೀತಿಯ ಹೇಳಿಕೆಗಳ ಮೂಲಕ ಜನರ ನಡುವೆ ಭಯವನ್ನು ಹುಟ್ಟಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರ ನಡುವೆ ಕಚ್ಚಾಟ, ರಘುಪತಿ ಭಟ್ ಅವರ ಉಚ್ಚಾಟನೆ, ಇವೆಲ್ಲದರ ನಡುವೆ ಶಾಸಕ ಯಶ್‍ಪಾಲ್ ಸುವರ್ಣ ಅವರಿಗೆ ಆಗುತ್ತಿರುವ ಹಿನ್ನಡೆಗಳು ಒಟ್ಟಾರೆ ಉಡುಪಿಯಲ್ಲಿ ಬಿಜೆಪಿ ಆಂತರಿಕ ಕಚ್ಚಾಟ ಬೂದಿ ಮುಚ್ಚಿದ ಕೆಂಡದಂತಿದೆ. ಇದನ್ನು ಮರೆಮಾಚಲು ಯಾವಾಗಲೋ ಡೆಮೋಲಿಶ್ ಮಾಡಿದ ಝಾರಾ ಹೋಟೆಲ್ ವಿಚಾರ ಮತ್ತೆ ಕೆದಕುತ್ತಿದ್ದಾರೆ ಎಂದರು.
ಈಗಾಗಲೇ ಕೆಡವಿ ತೆರವುಗೊಳಿಸಿರುವ ಕಟ್ಟಡ. ಅಲ್ಲಿ ಯಾವುದೇ ಹೊಸ ಕಾಮಗಾರಿ ನಡೆಯದೇ ಇರುವಾಗ ಯಶ್‍ಪಾಲ್ ಸುವರ್ಣ ಅವರು ಪೌರಾಯುಕ್ತರಿಗೆ ಯಾಕೆ ಒತ್ತಡ ಹಾಕುತ್ತಿದ್ದಾರೆ. ನಗರ ಸಭೆಯ ಅಧಿಕಾರಿಗಳಿಗೆ ಅವರ ಕಾನೂನಿನ ಪ್ರಕಾರ ಕೆಲಸ ಮಾಡಲು ಬಿಡಿ. ಅವರ ಕೆಲಸಕ್ಕೆ ನಾವು ಅಡ್ಡಿಪಡಿಸುವುದಿಲ್ಲ. ಅಭಿವೃದ್ಧಿ ಕೆಲಸಗಳು ಸಾಕಷ್ಟು ಮಾಡಲು ಇರುವಾಗ ಅದನ್ನು ಬಿಟ್ಟು ಒಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡಿ ಅವರ ಉದ್ಯಮಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಆಲಿ, ಪ್ರಧಾನ ಕಾರ್ಯದರ್ಶಿ ಆಶ್ರಫ್ ಬಾವ ಉಪಸ್ಥಿತರಿದ್ದರು.
Shri.Yashpal Suvarna ji is doing fabulous work on the way n under guidance under our Prime Minister Shri.Narendra Modi ji to demolish illegal building on the same path way done by Shri.Yogi Adityanath by demolishing illegal buildings in U.P.