ಉಡುಪಿ: 11.5ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗನ್ನು ಮರಳಿಸಿದ ಕೊಂಕಣ ರೈಲ್ವೆ ಸಿಬ್ಬಂದಿ

ಉಡುಪಿ, ಮೇ 28: ಮುಂಬೈಗೆ ತೆರಳುವ ರೈಲನ್ನು ಏರುವ ಅವಸರದಲ್ಲಿ ಅಮೂಲ್ಯ ವಸ್ತುಗಳಿದ್ದ ಟ್ರಾಲಿ ಬ್ಯಾಗ್‌ನ್ನು ಸುರತ್ಕಲ್ ರೈಲು ನಿಲ್ದಾಣದಲ್ಲಿ ಮರೆತು ಹೋಗಿದ್ದ ಮಹಿಳೆಗೆ ಕೊಂಕಣ ರೈಲ್ವೆಯ ಸಿಬ್ಬಂದಿ ಅದನ್ನು ಸುರಕ್ಷಿತವಾಗಿ ಹಿಂದಿರುಗಿಸಿದ ಘಟನೆ ನಿನ್ನೆ ಇಲ್ಲಿ ವರದಿಯಾಗಿದೆ.

ಟ್ರಾಲಿ ಬ್ಯಾಗ್ 174 ಗ್ರಾಂ ತೂಕದ ಚಿನ್ನಾಭರಣ ಹಾಗೂ ಅಮೂಲ್ಯವಾದ ವಜ್ರದ ಒಂದು ಸರ ಸೇರಿದಂತೆ 11.50ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ಹೊಂದಿತ್ತು. ಬ್ಯಾಗನ್ನು ಮರೆತು ಮುಂಬೈಗೆ ತೆರಳಿದ್ದ ಮಹಿಳೆ ನಿನ್ನೆ ಖುದ್ದಾಗಿ ಉಡುಪಿ ರೈಲು ನಿಲ್ದಾಣಕ್ಕೆ ಬಂದು ಬ್ಯಾಗ್ ಹಾಗೂ ಅದರಲ್ಲಿದ್ದ ಸೊತ್ತುಗಳನ್ನು ಮರಳಿ ಪಡೆದರು.

ಘಟನೆ ವಿವರ: ಮೇ 24ರಂದು ಕಾರ್ಕಳದ ಚಿತ್ರಾವತಿ ಅವರು ತನ್ನ ಮಕ್ಕಳೊಂದಿಗೆ ರೈಲು ನಂ.12620 ಮತ್ಸ್ಯಗಂಧ ದಲ್ಲಿ ಸುರತ್ಕಲ್‌ನಿಂದ ಕುರ್ಲಾಗೆ ಪ್ರಯಾಣಿಸಲು ಟಿಕೆಟ್ ಕಾದಿರಿಸಿದ್ದರು. ರೈಲು ನಿಲ್ದಾಣಕ್ಕೆ ಬಂದಾಗ ಜನರ ನೂಕು ನುಗ್ಗಲು, ಸುರಿಯುತಿದ್ದ ಮಳೆಯ ನಡುವೆ ಮಕ್ಕಳೊಂದಿಗೆ ರೈಲನ್ನೇರುವ ಗಡಿಬಿಡಿಯಲ್ಲಿ ಒಂದು ಟ್ರಾಲಿ ಬ್ಯಾಗ್‌ನ್ನು ನಿಲ್ದಾಣದಲ್ಲೇ ಮರೆತುಬಿಟ್ಟಿದ್ದರು.

ರೈಲು ಹೋದ ಬಳಿಕ ನಿಲ್ದಾಣವನ್ನು ಪರಿಶೀಲಿಸುತಿದ್ದ ವೇಳೆ ಕರ್ತವ್ಯದಲ್ಲಿದ್ದ ಪಾಯಿಂಟ್‌ಮನ್‌ಗಳಾದ ಜಗದೀಶ್ ಹಾಗೂ ಸಂಕೇತ್ ಅವರ ಕಣ್ಣಿಗೆ ನೀಲಿ ಬಣ್ಣದ ಟ್ರಾಲಿ ಬ್ಯಾಗ್ ಕಾಣಿಸಿತು. ಅವರು ಸುರತ್ಕಲ್‌ನ ಸೀನಿಯರ್ ಸ್ಟೇಶನ್ ಮಾಸ್ಟರ್ ಕಾರ್ಲ್‌ ಕೆ.ಪಿ. ಅವರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಕಾರ್ಲ್‌ ಅವರು ತಕ್ಷಣ ಉಡುಪಿಯ ಆರ್‌ಪಿಎಫ್ ಇನ್‌ಸ್ಪೆಕ್ಟರ್ ಪಿ.ವಿ.ಮಧುಸೂದನ್ ಅವರಿಗೆ ವಿಷಯ ತಿಳಿಸಿದರು. ಮಧುಸೂದನ್ ಅವರು ಸಿಸಿಟಿವಿಯನ್ನು ಪರಿಶೀಲಿಸಿ, ರೈಲಿನಲ್ಲಿ ಪ್ರಯಾಣಿಸಲು ಬಂದ ಪ್ರಯಾಣಿಕರು ಬ್ಯಾಗ್ ಮರೆತು ಹೋಗಿರುವುದನ್ನು ಖಚಿತಪಡಿಸಿಕೊಂಡು ಟ್ರಾಲಿ ಬ್ಯಾಗ್‌ಗೆ ಸ್ಟೇಶನ್ ಮಾಸ್ಟರ್ ಸೀಲ್ ಹಾಕಿ ಸುಭದ್ರವಾಗಿ ಮುಂದಿನ ರೈಲಿನಲ್ಲಿ ಉಡುಪಿಗೆ ಕಳುಹಿಸುವಂತೆ ಸೂಚಿಸಿದರು. ಅದರಂತೆ ಸುರತ್ಕಲ್‌ನ ಸ್ಟೇಶನ್ ಮಾಸ್ಟರ್ ಅದನ್ನು ಉಡುಪಿಗೆ ಕಳುಹಿಸಿದರು.

ಚಿತ್ರಾವತಿ ಅವರಿಗೆ ಮುಂಬೈಗೆ ತೆರಳಿದ ಬಳಿಕವಷ್ಟೇ ಬ್ಯಾಗ್ ಇಲ್ಲದಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಸಂಬಂಧಿ ಯನ್ನು ಸುರತ್ಕಲ್ ನಿಲ್ದಾಣಕ್ಕೆ ಕಳುಹಿಸಿ ವಿಚಾರಿಸಿದಾಗ ಅದು ಉಡುಪಿ ನಿಲ್ದಾಣದಲ್ಲಿದ್ದು, ಸ್ವತಹ ಬಂದು ಗುರುತು ಹೇಳಿ ಕೊಂಡೊಯ್ಯುವಂತೆ ತಿಳಿಸಲಾಯಿತು.

ಅದರಂತೆ ಚಿತ್ರಾವತಿ ಅವರು ಮೇ 26ರಂದು ಉಡುಪಿ ನಿಲ್ದಾಣಕ್ಕೆ ಬಂದು ಬ್ಯಾಗ್‌ನ ಗುರುತು ತಿಳಿಸಿ, ರೈಲ್ವೆಯವರ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿ ಚಿನ್ನಾಭರಣಗಳ ಸಹಿತ ಬ್ಯಾಗ್‌ನ್ನು ಮರಳಿ ಪಡೆದರು. ಚಿತ್ರಾವತಿ ಅವರು ಉಡುಪಿಯ ಆರ್‌ಪಿಎಫ್ ಪಡೆಗೆ ಹಾಗೂ ಸುರತ್ಕಲ್ ನಿಲ್ದಾಣಕ್ಕೆ ತೆರಳಿ ಅಲ್ಲಿನ ಸ್ಟೇಶನ್ ಮಾಸ್ಟರ್ ಹಾಗೂ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!